ಗಿಡಮರ ರಕ್ಷಿಸಲು ಸಂಕಲ್ಪ ಅಗತ್ಯ; ಮುನಿಸ್ವಾಮಿ

ಕೋಲಾರ,ಜೂ,೭- ಆಮ್ಲಜನಕದ ಮಹತ್ವವನ್ನು ಕೋವಿಡ್ ಸಂದರ್ಭದಲ್ಲಿ ಉಂಟಾದ ಸಾವು-ನೋವಿನಿಂದ ಮನಗಂಡಿದ್ದೇವೆ, ಅಂತಹ ಜೀವ ರಕ್ಷಕವನ್ನು ನಮಗೆ ಉಚಿತವಾಗಿ ನೀಡುವ ಗಿಡಮರಗಳನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ಸಂಸದ ಎಸ್.ಮುನಿಸ್ವಾಮಿ ಕರೆ ನೀಡಿದರು.
ತಾಲ್ಲೂಕಿನ ವಕ್ಕಲೇರಿ ಮಾರ್ಕಂಡೇಶ್ವರ ಬೆಟ್ಟದ ತಪ್ಪಲಲ್ಲಿ ಕರ್ನಾಟಕ ಅರಣ್ಯ ಇಲಾಖೆ ಜಿಲ್ಲಾಡಳಿತ,ಜಿಪಂ,ಜಿಲ್ಲಾ ಪೊಲೀಸ್ ಇಲಾಖೆ, ಕಾನೂನು ಸೇವೆಗಳ ಪ್ರಾಧಿಕಾರ,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತಿತರ ಸ್ವಯಂಸೇವಾ ಸಂಸ್ಥೆಗಳು, ಶಾಲಾ ಕಾಲೇಜುಗಳ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ಬಿತ್ತೋತ್ಸವ-೨೦೨೩’ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಅನೇಕರು ತಮ್ಮ ಸಂಬಂಧಿಗಳೂ, ಆಪ್ತರನ್ನು ಕಳೆದುಕೊಂಡರು ಇದಕ್ಕೆ ಕಾರಣ ಅಗತ್ಯ ಆಮ್ಲಜನಕ ಸಿಗದೇ ಹೋದದ್ದು ಎಂಬ ಸತ್ಯದ ಅರಿವು ಈಗಾಗಿದೆ, ಈ ಹಿನ್ನಲೆಯಲ್ಲಿ ಉಚಿತವಾಗಿ ಕೋಟಿಗಟ್ಟಲೇ ಬೆಲೆ ಬಾಳುವ ಆಮ್ಲಜನಕವನ್ನು ಪರಿಸರಕ್ಕೆ ನಿಸ್ವಾರ್ಥತೆಯಿಂದ ಒದಗಿಸುವ ಗಿಡಮರಗಳನ್ನು ಹೆಚ್ಚು ಬೆಳೆಸಲು ಮುಂದಾಗಬೇಕು ಎಂದರು.
ಪರಿಸರವನ್ನು ಭೂತದಂತೆ ಕಾಡುತ್ತಿರುವ ಪ್ಲಾಸ್ಟಿಕ್‌ನಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕಾಗಿದೆ, ಸುಂದರ ಪರಿಸರ ನಿರ್ಮಿಸಲು ಸಹಕರಿಸಬೇಕಾಗಿದೆ ಎಂದು ಕರೆ ನೀಡಿದ ಅವರು, ಪರಿಸರ ರಕ್ಷಣೆಗಾಗಿ ಮೋದಿಯವರು ಕೈಗೊಂಡ ಸ್ವಚ್ಚಭಾರತ ಅಭಿಯಾನ ಇದಕ್ಕೆ ಪೂರಕ ಎಂದರು.
ಪ್ಲಾಸ್ಟಿಕ್ ಬಳಸಬಾರದು ಎಂಬುದಕ್ಕೆ ಸರ್ಕಾರದ ಆದೇಶ,ಕಾನೂನು ಬೇಕಾಗಿಲ್ಲ, ಸಮಾಜದ ಪ್ರತಿಯೊಬ್ಬರಿಗೂ ಪರಿಸರ ಕಾಪಾಡುವ ಬದ್ದತೆ ಬಂದರೆ ಸಾಕು ಎಂದ ಅವರು, ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸುವ ಮೂಲಕ ಪರಿಸರ ರಕ್ಷಣೆಗೆ,ಸ್ವಚ್ಚತೆಗೆ ನಗರಸಭೆ,ಸ್ಥಳೀಯ ಸಂಸ್ಥೆಗಳು ಇಚ್ಚಾಶಕ್ತಿಯಿಂದ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ಪ್ಲಾಸ್ಟಿಕ್ ನಿಷೇಧಕ್ಕೆ ಕಾನೂನುಗಳು ಜಾರಿಯಾಗಿವೆ, ನಗರಸಭೆಗಳು ತಮಗಿಷ್ಟ ಬಂದಾಗ ಒಂದೆರಡು ಬಾರಿ ಧಾಳಿ ನಡೆಸಿ ನಂತರ ನಿದ್ದೆಗೆ ಜಾರುತ್ತವೆ, ಇದು ಸರಿಯಲ್ಲ, ಪ್ಲಾಸ್ಟಿಕ್ ಮುಕ್ತವಾಗಿಸಲು ನಮ್ಮ ಕಾರ್ಯಾಚರಣೆ ನಿರಂತರವಾಗಿರಬೇಕು ಎಂದು ಕಿವಿಮಾತು ಹೇಳಿದರು.
ಜಿಪಂ ಸಿಇಒ ಯುಕೇಶ್ ಕುಮಾರ್ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಹೇಳಿಕೆಯಾಗಿ ನಿಲ್ಲಬಾರದು, ಅದು ಕಾರ್ಯಗತವಾಗಬೇಕು, ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಸುವುದಿಲ್ಲ ಎಂದು ಸಂಕಲ್ಪ ಮಾಡಬೇಕು ಎಂದರು.
ಮನೆಗೊಂದು ಮರವನ್ನು ನೆಡುವ ಮೂಲಕ ಹಸಿರು ಪರಿಸರವನ್ನು ಬೆಳೆಸಬೇಕು, ಪರಿಸರವನ್ನು ಹಾಳು ಮಾಡುವುದರಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತವೆ ಎಂಬ ಸತ್ಯವನ್ನು ಸಮಾಜಕ್ಕೆ ತಿಳಿಸಬೇಕು ಎಂದು ಕರೆಕೊಟ್ಟರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾತನಾಡಿ, ಶಾಲಾ ಹಂತದಿಂದಲೇ ಸ್ವಚ್ಚತೆ,ಪರಿಸರ ರಕ್ಷಣೆಯ ಶಿಕ್ಷಣ ಸಿಕ್ಕರೆ ಸಾಕು ಮುಂದಿನ ದಿನಗಳಲ್ಲಿ ಅದು ಹೆಮ್ಮರವಾಗಿ ಇಡೀ ದೇಶಕ್ಕೆ ಶಕ್ತಿ ತುಂಬುತ್ತದೆ, ಉತ್ತಮ ಪರಿಸರ ನಿರ್ಮಾಣದ ಉದ್ದೇಶ ಸಾಕಾರಗೊಳ್ಳುತ್ತದೆ ಎಂದು ತಿಳಿಸಿ, ಪರಿಸರ ರಕ್ಷಣೆ ನಾವು ಮಾಡದಿದ್ದರೆ ಪರಿಸರವೇ ನಮಗೆ ತಕ್ಕ ಪಾಠ ಕಲಿಸುತ್ತದೆ ಎಂಬುದಕ್ಕೆ ಪ್ರಕೃತಿ ವಿಕೋಪಗಳೇ ಸಾಕ್ಷಿ ಎಂದರು.
ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ ಮಾತನಾಡಿ, ಪರಿಸರವನ್ನು ನಿರ್ಲ್ಲಕ್ಷ ಮಾಡಿರುವುದರಿಂದ ಅಕಾಲಿಕ ಮಳೆ ಉಂಟಾಗುತ್ತದೆ, ಬರಗಾಲ, ತಾಪಮಾನ ಏರಿಕೆ, ಅನೇಖ ರೋಗಗಳು ಹಾವಳಿ ನಮ್ಮನ್ನು ಆವರಿಸುತ್ತವೆ ಎಂದು ಎಚ್ಚರಿಸಿ, ಗಿಡ ಮರ ಬೆಳೆಸುವ ಅರಣ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಮಾರ್ಕಂಡೇಶ್ವರ ಬೆಟ್ಟದ ತಪ್ಪಲಲ್ಲಿ ಸಿಎಎನ್ ಗ್ರಾಮವಿಕಾಸ ಸಂಸ್ಥೆ, ಸಾಂತ್ವಾನ ಟ್ರಸ್ಟ್, ರವಿ ಇಂಟರ್ ನ್ಯಾಷನಲ್ ಕಾಲೇಜು, ಪವನ್,ಚನ್ನೇಗೌಡ ನರ್ಸಿಂಗ್ ಕಾಲೇಜು, ಎಸ್.ಎಂ.ಜಿ ವಿಷ್ಣು ನರ್ಸಿಂಗ್ ಕಾಲೇಜು ಮತ್ತಿರ ಸಂಸ್ಥೆಗಳ ವಿದ್ಯಾರ್ಥಿಗಳು ಗಿಡ ನೆಟ್ಟು ಜತೆಗೆ ಬೀಜ ಬಿತ್ತನೆಯಲ್ಲೂ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಟಿ.ಎಎಂ.ಸಹನ್‌ಕುಮಾರ್,ವಲಯ ಅರಣ್ಯಾಧಿಕಾರಿಗಳಾದ ವಾಸುದೇವಮೂರ್ತಿ,ಬಿಂದು,ಉಪವಲಯ ಅರಣ್ಯಾಧಿಕಾರಿ ಬಿ.ಮಂಜುನಾಥ್, ಕೆ.ಆನಂದ್‌ಕುಮಾರ್, ಹೆಚ್.ಎಂ.ಮನೋಹರ್,ಮುಖಂಡರಾದ ಮಾರ್ಕೋಂಡಪ್ಪ, ನಗರಸಭಾ ಸದಸ್ಯ ಪ್ರವೀಣ್ ಗೌಡ ಸೇರಿದಂತೆ ಗಸ್ತು ಅರಣ್ಯ ಪಾಲಕರು, ಸಾರ್ವಜನಿಕರು ಹಾಜರಿದ್ದರು.