ಬಾದಾಮಿ,ಜೂ8: ಪರಿಸರ ಅಸಮತೋಲನದಿಂದ ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾಣ ಹೆಚ್ಚಾಗಿದೆ. ವಾತಾವರಣದಲ್ಲಿ ವೈಪರಿತ್ಯ ಉಂಟಾಗಿ ಸರಿಯಾಗಿ ಮಳೆಯಾಗುತ್ತಿಲ್ಲ. ಹಾಗಾಗಿ ಪರಿಸರ ಸಮತೋಲನ ಕಾಪಾಡಲು ಸಮುದಾಯದ ಸಹಭಾಗಿತ್ವ ತುಂಬಾ ಅಗತ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಮನೆ ಹಾಗೂ ಶಾಲೆಗಳಲ್ಲಿ ಗಿಡಗಳನ್ನು ಬೆಳೆಸಿ, ಪರಿಸರ ಸಂರಕ್ಷಣೆಯಲ್ಲಿ ಕೈಜೋಡಿಸಬೇಕು ಎಂದು ಕೆರಕಲಮಟ್ಟಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿ.ಎಚ್.ನದಾಫ ಹೇಳಿದರು.
ಅವರು ಇಕೋ ಕ್ಲಬ್ ಚಟುವಟಿಕೆಯಡಿ ಪರಿಸರ ಸ್ನೇಹಿ ಸಂಘದ ಸಹಯೋಗದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಶ್ರೀಮಂತ ಮಹೇಶ ಪಾಂಡುರಂಗಗೌಡ ನಾಡಗೌಡ ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಇಕೋ ಕ್ಲಬ್ ನೋಡಲ್ ಅಧಿಕಾರಿ, ಸಹಶಿಕ್ಷಕ ಎಸ್.ವೈ.ಮಡಿವಾಳರ ಪರಿಸರ ದಿನಾಚರಣೆ ಕುರಿತು ಸುವಿವರವಾಗಿ ಮಾತನಾಡಿ ಪರಿಸರ ಉತ್ತಮವಾಗಿದ್ದರೆ ಮಾತ್ರ ಮಾನವ ಸೇರಿಂದತೆ ಎಲ್ಲ ಪ್ರಾಣಿ ಪಕ್ಷಿಗಳೂ ಈ ಭೂಮಿಯಲ್ಲಿ ಬದುಕುಳಿಯಲು ಸಾಧ್ಯವಾಗುತ್ತದೆ. ಉತ್ತಮ ಗಾಳಿ, ಬೆಳಕು, ಸ್ವಚ್ಛತೆ ಹಾಗೂ ಹಸಿರು ಪರಿಸರದಿಂದ ಮಾತ್ರ ಮಾನವ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಗಿಡಗಳನ್ನು ನೆಟ್ಟು ಬೆಳಸಬೇಕು ಎಂದು ಹೇಳಿದರು. ವೇದಿಕೆಯ ಮೇಲೆ ಎಸ್.ವಿ.ಸಮಗೊಂಡ, ಆರ್.ವಿ.ಬದರಿ, ಪಿ.ಎಚ್.ಜಾಲಿಹಾಳ, ಆರ್.ಕೆ.ಕಕರಡ್ಡಿ ಹಾಜರಿದ್ದರು. ಪಿ.ಬಿ.ಭಜಂತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು. ಟಿ.ಟಿ.ನಾರಾಯಣಕರ ವಂದಿಸಿದರು.