ಗಿಡಗಳನ್ನು ಹಾಕಿದರೆ ಸಾಲದು ನೀರು ಹಾಕಿ ಪೋಷಿಸಿ : ಪ್ರೊ. ವೈ.ವೃಷಭೇಂದ್ರಪ್ಪ

ದಾವಣಗೆರೆ, ಜೂ. 6; ಮಣ್ಣು, ನೀರು, ಗಿಡ ಮರಗಳು ಸಮತೋಲನ ಇಲ್ಲದಿದ್ದರೆ ಪರಿಸರದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಫಲವತ್ತಾದ ನೆಲವೇ ಇಲ್ಲ ಎಂದರೆ ಗಿಡ ಮರಗಳು ಹೇಗೆ ಬೆಳೆಯಲು ಸಾಧ್ಯ. ಭೂಮಿಯನ್ನು ಫಲವತ್ತಾಗಿಡುವ ಜವಾಬ್ದಾರಿ ನಮ್ಮೆಲರ ಮೇಲಿದೆ. ಭೂಮಿ ಬರಡಾದರೆ ಯಾವುದೇ ಗಿಡ ಮರ ಬೆಳೆಸಲು ಸಾಧ್ಯವಿಲ್ಲ ಎಂದು ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜಿನ ನಿರ್ದೇಶಕರಾದ ಪ್ರೊ.ವೈ.ವೃಷಭೇಂದ್ರಪ್ಪ ತಿಳಿಸಿದರು.ನಗರದ ಪಿ.ಜೆ.ಬಡಾವಣೆಯಲ್ಲಿರುವ ಸೆಂಟ್ ಪಾಲ್ಸ್ ಕಾನ್ವೆಂಟ್ ಶಾಲೆಯಲ್ಲಿ  ಆಯೋಜಿಸಿದ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ರಕ್ಷಣೆ ಎಂದು ಬರೀ ಗಿಡಗಳನ್ನು ಹಾಕಿದರೆ ಸಾಲದು ಅವುಗಳಿಗೆ ನೀರನ್ನು ಹಾಕಿ ಪೋಷಣೆ ಮಾಡಬೇಕು ಎಂದರು. ಪ್ರಪಂಚದಲ್ಲಿ ಮೂರನೇ ಒಂದು ಭಾಗ ಮರುಭೂಮಿ ಇದೆ. ಹಿಂದೆಲ್ಲಾ ರಜೆ ಬಂದರೆ ಹೊಲ, ತೋಟಗಳಿಗೆ, ಕಾಡುಗಳಿಗೆ ಹೋಗುತ್ತಿದ್ದರು, ಅಲ್ಲಿ ಉತ್ತಮ ಪರಿಸರ ಸಿಗುತ್ತಿತ್ತು. ಪರಿಸರದ ಮಧ್ಯೆ ಬೆಳೆದಾಗ ಉತ್ತಮವಾದ ಆಮ್ಲಜನಕವನ್ನು ಪಡೆಯಲು ಸಾಧ್ಯ. ಹಿರಿಯರೆಲ್ಲರೂ ಪರಿಸರದ ಮದ್ಯೆ ಬೆಳೆದಿದ್ದರಿಂದ ಅವರುಗಳೆಲ್ಲಾ ಆರೋಗ್ಯವಾಗಿದ್ದು ನೂರು ವರ್ಷಗಳ ಕಾಲ ಬದುಕಿ ಜೀವನ ಸಾಗಿಸಿದ್ದಾರೆ ಎಂದರು.ಪರಿಸರ, ಈ ಭೂಮಿಯನ್ನು ಉಳಿಸಲು ಸಮಸ್ಯೆಗಳು ಎದುರಾಗುತ್ತಿವೆ. ಈ ವರ್ಷದ ಥೀಂ ನಂತೆ ಪ್ಲಾಸ್ಟಿಕ್ ರ‍್ಯಾಯವಾಗಿ ಬಳಕೆ ಬಗ್ಗೆ, 400 ಮಿಲಿಯನ್ ಟನ್ ನಷ್ಟು ವಿಶ್ವದಲ್ಲಿ ಪ್ಲಾಸ್ಟಿಕ್ ತಯಾರಾಗುತ್ತಿದೆ. 10 ರಷ್ಟು ಮಾತ್ರ ಮರುಬಳಕೆಯಾಗುತ್ತಿದೆ. ಉಳಿದಿದ್ದೆಲ್ಲಾ ಭೂಮಿ, ಸಮುದ್ರ ಸೇರುತ್ತಿದೆ. ಪ್ಲಾಸ್ಟಿಕ್ ಸೇರಿ ಸೇರಿ ಉತ್ತರ ಅಮೇರಿಕಾ ಸಮೀಪದ ಸಮುದ್ರದಲ್ಲಿ ಪ್ಲಾಸ್ಟಿಕ್ ದ್ವೀಪವೇ ಆಗಿದೆ. ಇದರಿಂದ ಜಲಚರ ಪ್ರಾಣಿಗಳಿಗೆ ತೊಂದರೆಯಾಗಿ ಸಾಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳು ಬಾಲ್ ಪೆನ್ ಇಂಕ್ ಖಾಲಿಯಾಗುತ್ತಿದ್ದಂತೆ ಪೆನ್ ಬದಲಾಯಿಸದೇ, ಬಿಸಾಡದೇ ಅವುಗಳಿಗೆ ರಿಫಿಲ್ ಸಿಗುತ್ತವೆ ಅವುಗಳನ್ನು ಹಾಕಿ ಬಳಸಿ, ಇದರಿಂದ ಪೆನ್‌ಗಳನ್ನು ಮರುಬಳಕೆ ಮಾಡಬಹುದು ಎಂದರು. ಪ್ರತಿಯೊಬ್ಬರೂ ಕೂಡಾ ಮಾರುಕಟ್ಟೆಗೆ ತೆರಳುವಾಗ ಬಟ್ಟೆ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಿ, ನಿಮ್ಮ ಪೋಷಕರಿಗೂ ಕೂಡಾ ಪ್ಲಾಸ್ಟಿಕ್ ಬ್ಯಾಗ್ ಬಳಕೆ ಬೇಡ ಎಂದು ತಿಳಿಸಿರಿ.ಈ ಸಂದರ್ಭದಲ್ಲಿ ಸಂತ ಪೌಲರ ಸ್ಥಳೀಯ ಸಂಸ್ಥೆ ವ್ಯವಸ್ಥಾಪಕರಾದ ಸಿಸ್ಟರ್ ಮಾರ್ಜರಿ, ಸಿಸ್ಟರ್ ಲಿಂಡಾ, ಸಿಸ್ಟರ್ ರೋಸಿಂತಾ, ಸಿಸ್ಟರ್ ಸಮಂತ, ಸಿಸ್ಟರ್ ಕ್ಲಮೆನ್ಸಿಯಾ, ಸಿಸ್ಟರ್ ಅಲ್ಬಿನಾ, ಶಿಕ್ಷಕರಾದ ಅಮಲ, ರಾಗಿಣಿ, ಭಾಗ್ಯನಾಥನ್, ಕಿರಣ್, ಗೋವಿಂದಪ್ಪ, ಸ್ಟೀಫನ್, ಟಿ.ಎಂ. ರವೀಂದ್ರ ಸ್ವಾಮಿ, ಜಸ್ಸಿ, ಎಲಿಸಾ, ಅನುಷಾ, ರಾಧಾ, ಅಶ್ವಿನಿ, ರಜನಿ, ನಯನ, ರೀಟಾ, ಫಿಲೊಮಿನಾ ಸೇರಿದಂತೆ ವಿವಿಧ ವಿಭಾಗಗಳ ಶಿಕ್ಷಕರು ಭಾಗವಹಿಸಿದ್ದರು. ಶಾಲೆ ಮಕ್ಕಳು ಪರಿಸರ ಸಂರಕ್ಷಣೆ ಕುರಿತು ಕಿರು ನಾಟಕಗಳನ್ನು ಪ್ರದರ್ಶಿಸಿದರು.