ಗಿಡಗಳನ್ನು ಮಕ್ಕಳಂತೆ ಪೋಷಿಸಿ:ನಾರಾಯಣಚಾರ್

ದೇವನಹಳ್ಳಿ,ಜೂ.೭-ಗಿಡಗಳನ್ನು ನೆಟ್ಟರೆ ಸಾಲದು, ಅವುಗಳಿಗೂ ನಮ್ಮಂತೆ ಜೀವ ಇದೆ, ನೆಟ್ಟಮೇಲೆ ಅವುಗಳನ್ನು ಮಕ್ಕಳಂತೆ ಪೋಷಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂದು ದೇವನಹಳ್ಳಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಜಿ. ನಾರಾಯಣಚಾರ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಯಲಿಯೂರು ಗ್ರಾಮದ ಸರ್.ಎಂ. ವಿಶ್ವೇಶ್ವರಯ್ಯ ಇಂಗ್ಲೀಷ್ ಸ್ಕೂಲ್‌ನಲ್ಲಿ ಸರಸ್ವತಿ ಸಂಗೀತ ವಿದ್ಯಾಲಯ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಲ್ಲಿ ‘ವಿಶ್ವಪರಿಸರದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ೧೯೭೪ರಲ್ಲಿ ವಿಶ್ವಸಂಸ್ಥೆಯ ಅನುಮೋದನೆಯಂತೆ ಪ್ರತಿ ವರ್ಷ ಜೂನ್ ೫ ರಂದು ವಿಶ್ವ ಪರಿಸರ ದಿನವನ್ನಾಗಿ ಆಚರಿಸಲಾಗುತ್ತದೆ. ಮಾನವನೂ ಸೇರಿದಂತೆ ಪ್ರಾಣಿ, ಪಕ್ಷಿಗಳು, ಜೀವಸಂಕುಲ ಆಹಾರ, ಗಾಳಿ ನೀರು ಇತರೆ ಅಗತ್ಯತೆ ಪರಿಸರವನ್ನು ಅವಲಂಬಿಸಿದೆ. ಆದರೆ ಮಾನವ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಹಾಳು ಮಾಡುತ್ತಿದ್ದು ಹವಾಮಾನ ವೈಪರೀತ್ಯ, ಆರೋಗ್ಯ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ಹೀಗಾಗಿ ಪರಿಸರವನ್ನು ಉಳಿಸುವಂತೆ ಜನರಿಗೆ ಎಚ್ಚರಿಕೆ ನೀಡಲು ವಿಶ್ವ ಪರಿಸರ ದಿನವನ್ನು ಆಚರಿಸಲು ವಿಶ್ವಸಂಸ್ಥೆಯು ನಿರ್ಧರಿಸಲಾಯಿತು ಎಂದು ಹೇಳಿದರು.
ಸರಸ್ವತಿ ಸಂಗೀತ ವಿದ್ಯಾಲಯದ ಕಾರ್ಯದರ್ಶಿ ಮಂಜುನಾಥ ಜಿ ಮಾತನಾಡಿ ಪರಿಸರಕ್ಕೆ ಉತ್ತಮ ಗಾಳಿ, ನೀರು, ಅಹಾರ ಇವುಗಳ ಮುಖ್ಯ. ಆದರೆ ಪ್ರಕೃತಿಯ ಮೇಲೆ ಮಾನವನ ದೌರ್ಜನ್ಯದಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು ಫಲವತ್ತತೆ ಹಾಳಾಗುತ್ತಿದೆ. ಇದಕ್ಕಾಗಿ ಪ್ಲಾಸ್ಟಿಕ್ ಉತ್ಪಾದನೆ ನಿಲ್ಲಬೇಕು. ಅನಗತ್ಯವಾಗಿ ಬೆಳೆದ ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ಪುರಸಭೆಗಳು, ಪಂಚಾಯಿತಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪಠ್ಯ ಪುಸ್ತಕಗಳಲ್ಲಿ ಪರಿಸರ ರಕ್ಷಣೆಯ ಬಗ್ಗೆ ಹೆಚ್ಚು ಒತ್ತು ನೀಡಬೇಕು. ಎಲ್ಲ ಸಮಾರಂಭಗಳಿಗೆ ಉಡುಗೊರೆಯಾಗಿ ಗಿಡ ಕೊಡುವ ಅಭ್ಯಾಸ ರೂಡಿಸಿಕೊಳ್ಳಬೇಕು. ಸಾರ್ವಜನಿಕರು ಗಿಡ ಮರಗಳನ್ನು ಬೆಳೆಸುವಂತೆ ಪ್ರೇರೇಪಿಸಬೇಕು. ಪರಿಸರ ನಾಶ ಮಾಡದಂತೆ ಜಾಗೃತಿ ಮೂಡಿಸುವುದು ಮತ್ತು ಪ್ರತಿಯೊಂದು ಜೀವಿಗೆ ಪರಿಸರದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವಂತಾಗಬೇಕು. ಈ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಸಂಘ ಸಂಸ್ಥೆಗಳು, ನಾಗರೀಕರು ಒಟ್ಟಾಗಿ ಶ್ರಮಿಸಬೇಕು. ಈ ಹಿಂದೆ ಪಟ್ಟಣದ ಪಾರಿವಾಟ ಗುಟ್ಟದಲ್ಲಿ ಸಂಘ ಸಂಸ್ಥೆಗಳೇ ನೆಟ್ಟ ಗಿಡಗಳು ಕೆಲವೇ ವರ್ಷಗಳಲ್ಲಿ ತಲೆ ಎತ್ತಿ ನಿಂತಿರುವುದನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸುಮಾರು ೧೦೦ ಕ್ಕೂ ಹೆಚ್ಚು ಮಕ್ಕಳು ವಿಶ್ವಪರಿಸರ ದಿನದ ಅಂಗವಾಗಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದರು.