ಗಿಡಗಳನ್ನು ನೆಡುವುದಲ್ಲ ಅವುಗಳನ್ನು ಉಳಿಸಿ ಬೆಳೆಸಬೇಕು: ಜಿ.ಟಿ.ಡಿ ಅಭಿಮತ

ಮೈಸೂರು,ಜು.23:- ನಾವುಗಳು ವನಮಹೋತ್ಸವ ಸಮಾರಂಭದಲ್ಲಿ ಗಿಡಗಳನ್ನು ನೆಡವುದಲ್ಲ ಅವುಗಳನ್ನು ಉಳಿಸಿ ಬೆಳಸಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.
ಅವರು ಇಂದು ಕೂರ್ಗಳ್ಳಿ ಕೈಗಾರಿಕ ಪ್ರದೇಶದಲ್ಲಿರುವ ಎನ್.ಇ.ಐ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇವರ ವತಿಯಿಂದ ವತಿಯಿಂದ ನಡೆದ ನಾಳಿನ ಹಸಿರಿಗೆ ಸಸಿಗಳೇ ಉಸಿರು ಎಂಬ ಘೋಷವಾಕ್ಯದಡಿಯಲ್ಲಿ ವನಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಎನ್.ಇ.ಐ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನ ಎನ್.ಎಸ್.ಎಸ್ ನ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಹೂಟಗಳ್ಳಿಯಿಂದ ಬಸ್ತಿಪುರದ ವರೆಗೆ ರಸ್ತೆ ವಿಭಜಕದಲ್ಲಿ ಅಲಂಕಾರಿಕ ಹೂವಿನ ಗಿಡಗಳನ್ನು ನೆಟ್ಟು ಬೆಳೆಸಲು ಕೈಗೊಂಡಿರುವುದು ಅತ್ಯಂತ ಸಂತೋಷದ ವಿಷಯ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಬೆಳೆಯಬೇಕು ಇದರಿಂದ ಮುಂದಿನ ಪೀಳಿಗೆಗೆ ನಾವು ಪರಿಸರವನ್ನು ಉಳಿಸಲು ಸಾಧ್ಯವೆಂದರು.
ವಿದ್ಯಾರ್ಥಿಗಳು ಸರಳತೆ ಮೈಗೂಡೊಸಿಕೊಳ್ಳಬೇಕು, ಗುರುಗಳಿಗೆ ತಂದೆ-ತಾಯಿಗೆ ಗೌರವ ಕೊಡುವ ಪ್ರವೃತ್ತಿಬೆಳೆಸಿಕೊಳ್ಳಬೇಕು, ವಿದ್ಯಾರ್ಥಿಗಳು ಉತ್ತಮ ನಾಯಕತ್ವ ಮೈಗೂಡಿಸಿಕೊಂಡು ಹೊರಹೊಮ್ಮಬೇಕು ವಿದ್ಯಾರ್ಥಿಗಳಿಗೆ ಹೇಳಿದರು.
ಪರಿಸರ ಬಹಳ ಮುಖ್ಯ, ಗಿಡಮರಗಳಿಂದ ಶುದ್ಧ ಗಾಳಿ ಸಿಗುತ್ತದೆ. ಪರಿಸರದಲ್ಲಿ ಕಾರ್ಬನ್ ಅಂಶ ಹೆಚ್ಚಾದರೆ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಹವಾಮಾನ ಬದಲಾವಣೆ ಆಗುತ್ತಿದೆ.
ಕಳೆದ ವರ್ಷ ವಿಶ್ವದ ತಾಪಮಾನ ಶೇ. 1 ರಷ್ಟು ಹೆಚ್ಚಾಗಿದ್ದು, ಹಿಮಬಂಡೆಗಳು ಕರುಗುತ್ತಿವೆ. ಇದರಿಂದ ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚಾಗಿ ಜನರಿಗೆ ತೊಂದರೆಯಾಗುವ ಜೊತೆಗೆ ಪ್ರವಾಹ ಭೀತಿಯೂ ಎದುರಾಗುತ್ತದೆ.
ಈ ಸಮಸ್ಯೆಗಳನ್ನು ತಡೆಗಟ್ಟಲು ಅರಣ್ಯೀಕರಣ ಬಹಳ ಮುಖ್ಯ ಎಂದರು.
ಮರ-ಗಿಡ, ಕಾಡು, ಗಿಡಮೂಲಿಕೆ ಉಳಿದರೆ ಪ್ರಕೃತಿ ಸಮತೋಲನವಾಗಿ ಜೀವಜಗತ್ತೂ ಕೂಡ ನೆಮ್ಮದಿಯ ಬದುಕು ಕಾಣಲು ಸಾಧ್ಯ, ಈ ಭೂಮಿ, ಪರಿಸರವನ್ನು ಮುಂದಿನ ಪೀಳಿಗೆಗಾಗಿ ಉಳಿಸಲು ಪಣತೊಡಣ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಸ್ಯ ಸಂರಕ್ಷಣೆ, ಅರಣ್ಯಗಳನ್ನು ಉಳಿಸಿಕೊಳ್ಳುವ ಪ್ರಯತ್ನ ಪ್ರಾಮಾಣಿಕವಾಗಿ ನಡೆಯಬೇಕು,ಜನರು ಜಾಗೃತರಾಗಬೇಕು ಎಂದರು.
ಜನ್ಮದಿನ, ಮದುವೆ ಇತರೆ ಕಾರ್ಯಕ್ರಮಗಳ ನೆನಪಿಗಾಗಿ ಗಿಡಗಳನ್ನು ನೆಟ್ಟುಬೆಳೆಸುವ ಆಚರಣೆ ಜನರಲ್ಲಿ ಬೆಳೆದು ಬರಬೇಕು ಎಂದರು.
ನಗರ ಪ್ರದೇಶದಲ್ಲಿ ಜನಸಂದಣಿ, ಕೈಗಾರಿಕೆಗಳು ಉಗುಳವ ಹೊಗೆ, ಶಬ್ದಮಾಲಿನ್ಯ, ಕೊಳಚೆ ಪ್ರದೇಶದ ದುರ್ಗಂಧ ಇದರಿಂದ ಜನರ ಜೀವನ ದಿನೆ ದಿನೆ ಕೆಡುತ್ತಿರುವುದನ್ನು ನಾವು ಗಮನಿಸಬೇಕು, ಇದರಿಂದ ಪಾರಾಗಲು ಉಳಿದಿರುವ ಏಕೈಕ ಮಾರ್ಗ ವೆಂದರೆ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಬೇಕು ಎಂದು ತಿಳಿಸಿದರು.
ಹಸಿರು ಕಣ್ಣಿಗೆ ತಂಪು, ಮರ ಬೆಳೆಸುವುದು ದೇಹದ ಆರೋಗ್ಯವನ್ನು ಕಾಪಾಡುತ್ತದೆ, ಮರ ದೇಶದ ಸಂಪತ್ತು, ಮಕ್ಕಳಂತೆ ಗಿಡಗಳನ್ನು ಬೆಳೆಸಿ ಉಳಿಸುವ ನಿಟ್ಟಿನಲ್ಲಿ ನಾವು ಪ್ರವೃತ್ತರಾಗೊಣ ಎಂದು ನೆರೆದಿದ್ದ ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಮಾರಂಭದಲ್ಲಿ ಕಾಲೇಜಿನ ಖಜಾಂಚಿ ದತ್ತಕುಮಾರ್, ಬಿ.ಇ.ಎಂ.ಎಲ್.ನ ಕಾರ್ಯನಿರ್ವಾಹಕ ರಾಧಕೃಷ್ಣ,ಪ್ರಾಂಶುಪಾಲರಾದ ಅರ್ಚನ, ಡಾ.ಲೋಕೇಶ್, ಶ್ರೀನಿಧಿ, ಪ್ರಸಾದ್, ಸಂದೀಪ್, ಹರ್ಷಿತ, ಕೂರ್ಗಳ್ಳಿ ಸತೀಶ್, ನಂಜುಂಡೇಗೌಡರು ಸೇರಿದಂತೆ ಹಕವಾರು ಮುಖಂಡರು ಭಾಗವಹಿಸಿದ್ದರು.