ಗಿಡಗಳನ್ನು ನೆಟ್ಟು ಪೋಷಿಸಿ ಪರಿಸರ ಸಂರಕ್ಷಣೆ ಮಾಡೋಣ

ಕಲಬುರಗಿ :ಜೂ.5: ಪರಿಸರ ಸಮತೋಲನಕ್ಕೆ ಶೇ.33ರಷ್ಟು ಅರಣ್ಯ ಪ್ರದೇಶ ಅವಶ್ಯಕತೆಯಿದ್ದು, ಇದರ ಪ್ರಮಾಣ ಕಡಿಮೆಯಿರುವುದುರಿಂದ ಪರಿಸರ ಅಸಮತೋಲನವಾಗುತ್ತಿದೆ. ಆದ್ದರಿಂದ ಎಲ್ಲರು ಗಿಡಗಳನ್ನು ನೆಟ್ಟು ಅವುಗಳನ್ನು ಮಗುವಿನಂತೆ ಪೋಷಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡುವ ಕಾರ್ಯ ಸಾಮೂಹಿಕವಾಗಿ ಮಾಡೋಣ ಎಂದು ಉಪನ್ಯಾಸಕ ರವೀಂದ್ರಕುಮಾರ ಸಿ.ಬಟಗೇರಿ ಹೇಳಿದರು.

   ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಸೋಮವಾರ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಟ್ಟು ನೀರುಣಿಸುವ ಮೂಲಕ 'ವಿಶ್ವ ಪರಿಸರ ದಿನಾಚರಣೆ'ಯನ್ನು ಉದ್ಘಾಟಸಿ ಅವರು ಮಾತನಾಡಿದರು.
ಜೀವಶಾಸ್ತ್ರ ಉಪನ್ಯಾಸಕಿ ಶರಣಮ್ಮ ಭಾವಿಕಟ್ಟಿ, ಸ್ಥಳೀಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶಕುಮಾರ ಚಿಂಚೋಳಿ ಮಾತನಾಡುತ್ತಾ, ಪರಿಸರ ಸಮತೋಲನವಾಗಿಯೇ ಹುಟ್ಟಿದೆ. ಆದರೆ ಅದರ ಮೇಲೆ ಮಾನವ ತನ್ನ ದಬ್ಬಾಳಿಕೆಯನ್ನು ಮಾಡಿ, ತನಗಿಷ್ಟದಂತೆ ಬದಲಾಯಿಸಬೇಕೆಂಬ ಪ್ರಯತ್ನಕ್ಕೆ ಕೈಹಾಕಿರುವುದರ ಪರಿಣಾಮವಾಗಿ ಪರಿಸರದಲ್ಲಿ ಏರು-ಪೇರುಗಳಾಗಿ ನೈಸರ್ಗಿಕ ಅವಘಡಗಳಾಗುತ್ತಿವೆ. ಆದ್ದರಿಂದ ವಾಸ್ತವಿಕತೆಯನ್ನು ಅರ್ಥ ಮಾಡಿಕೊಂಡು ಪರಿಸರ ಮೂಲ ಸ್ಥಿತಿಯನ್ನು ಕಾಪಾಡುವುದು ಪ್ರಸ್ತುತ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ನಯಿಮಾ ನಾಹಿದ್, ಶಂಕ್ರೆಪ್ಪ ಹೊಸದೊಡ್ಡಿ, ಸಮೀನಾ ಬೇಗಂ, ಸಂಗೀತಾ ಹಿರೇಮಠ, ಪ್ರ.ದ.ಸ ನೇಸರ ಎಂ.ಬೀಳಗಿಮಠ, ಸೇವಕ ಭಾಗಣ್ಣ ಹನ್ನೂರ್ ಹಾಗೂ ಸ್ವಯಂ ಸೇವಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.