ಗಾಳಿ-ಮಳೆಗೆ ಅಪಾರ ಹಾನಿ 

ಉಡುಪಿ, ಸೆ.1೩- ಬೈಂದೂರು ತಾಲೂಕಿನ ಉಪ್ಪುಂದ ಸೇರಿದಂತೆ ಹಲವು ಗ್ರಾಮಗಳಲ್ಲಿ ನಿನ್ನೆ ಬೀಸಿದ ಬಿರುಗಾಳಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಹತ್ತಕ್ಕೂ ಅಧಿಕ ಮನೆ, ಕೋಳಿಫಾರ್ಮ್‌ ಹಾಗೂ ಜಾನುವಾರು ಕೊಟ್ಟಿಗೆಗಳ ಛಾವಣಿ ಹಾರಿಹೋಗಿದೆ. ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಹೆರಂಜಾಲು ಗ್ರಾಮದ ಹೆಗ್ಗೇರಿ ಎಂಬಲ್ಲಿದ್ದ ಕೋಳಿಫಾರ್ಮ್ ಒಂದು ಬಿರುಗಾಳಿಗೆ ಸಂಪೂರ್ಣವಾಗಿ ಧರಾಶಾಹಿಯಾಗಿದೆ. ನಾರಾಯಣ ದೇವಾಡಿಗ ಎಂಬವರಿಗೆ ಸೇರಿದ ಈ ಕೋಳಿ ಫಾರ್ಮ್ ಕಳೆದ ಕೆಲವು ವರ್ಷ ಗಳಿಂದ ಇಲ್ಲಿ  ಕಾರ್ಯಾಚರಿಸುತಿದ್ದು, ನಿನ್ನೆ ಬೀಸಿದ ಗಾಳಿಗೆ ಸಂಪೂರ್ಣವಾಗಿ ನೆಲಕಚ್ಚಿದೆ. ಇದರಿಂದ ಫಾರ್ಮ್‌ನಲ್ಲಿದ್ದ 2000 ಕ್ಕೂ ಅಧಿಕ ಕೋಳಿ ಹಾಗೂ ಕೋಳಿಮರಿಗಳು ಸಾವನ್ನಪ್ಪಿವೆ ಎಂದು ಮಾಲಕರು ತಿಳಿಸಿರುವುದಾಗಿ ಗ್ರಾಮದ ವಿಎ ಹನುಮಂತ ರಾಯ ತಿಳಿಸಿದ್ದಾರೆ. ನಿನ್ನೆ ಬೀಸಿದ ಗಾಳಿಗೆ ಉಪ್ಪುಂದ, ತೆಗ್ಗರ್ಸೆ, ನಂದನವನ, ನಾವುಂದದ ೧೦ಕ್ಕೂ ಅಧಿಕ ಮನೆಗಳಿಗೆ ಸಾಧಾರಣದಿಂದ ಭಾರೀ ಪ್ರಮಾಣದ ಹಾನಿ ಉಂಟಾಗಿದೆ. ಹೆಚ್ಚಿನ ಮನೆಗಳ ಛಾವಣಿ ಬೀಸಿದ ಗಾಳಿಗೆ ಹಾರಿಹೋಗಿವೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಆದ ನಷ್ಟದ ಬಗ್ಗೆ ವರದಿ ನೀಡಲಿದ್ದಾರೆ ಎಂದು ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಹೆಗಡೆ ತಿಳಿಸಿದ್ದಾರೆ. ಉಪ್ಪುಂದ ಗ್ರಾಮದ ಈಶ್ವರ ಹರಿಕಾಂತ್ ಹಾಗೂ ಚೆನ್ನ ಪೂಜಾರಿ ಎಂಬವರ ಮನೆಯ ಛಾವಣಿಗಳು ಸಂಪೂರ್ಣ ವಾಗಿ ಹಾರಿಹೋಗಿದ್ದು ತಲಾ ಎರಡು ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ಇದೇ ಗ್ರಾಮದ ಸುಶೀಲ ಖಾರ್ವಿಯವರ ಮನೆಯ ಛಾವಣಿ ಹಾರಿಹೋಗಿದ್ದು, ಮನೆಗೆ ಭಾಗಶ: ಹಾನಿಯಾಗಿದೆ. ಇದರಿಂದ 30 ಸಾವಿರ ರೂ. ನಷ್ಟವಾದ ಬಗ್ಗೆ ವರದಿಗಳು ತಿಳಿಸಿವೆ. ಉಪ್ಪುಂದ ಗ್ರಾಮದ ಸುಬ್ಬಯ್ಯ ಪೂಜಾರಿ, ಬಚ್ಚ ಪೂಜಾರಿ ಮನೆಗೆ ತಲಾ 20,000ರೂ, ಶೇಷ ಖಾರ್ವಿ ಮನೆಗೆ 15000ರೂ., ನಾರಾಯಣ ಮೊಗವೀರ ಮನೆಗೆ 25,000ರೂ. ನಷ್ಟದ ಅಂದಾಜು ಮಾಡಲಾಗಿದೆ. ಉಳಿದಂತೆ ನಂದನವನದ ಶೇಷಿ ಪೂಜಾರ್ತಿ ಇವರ ವಾಸದ ಮನೆ ಹಾಗೂ ಜಾನುವಾರು ಕೊಟ್ಟಿಗೆಗೆ ಭಾಗಶ: ಹಾನಿಯಾಗಿದ್ದರೆ, ತಗ್ಗರ್ಸೆಯ ಲಕ್ಷ್ಮಣ ಆಚಾರ್ಯರ ವಾಸದ ಮನೆಯ ಮೇಲ್ಚಾವಣಿ ಭಾಗಶ: ಹಾರಿಹೋಗಿದ್ದು, ತಲಾ 50000ದಷ್ಟು ನಷ್ಟವಾಗಿದೆ. ನಾವುಂದದ ಈಶ್ವರ ಖಾರ್ವಿಯವರ ಮನೆಯ ಜಾನುವಾರು ಕೊಟ್ಟಿಗೆ ಗಾಳಿ-ಮಳೆಗೆ ಸಂಪೂರ್ಣ ಹಾನಿಯಾಗಿದ್ದು 25,000 ರೂ.ನಷ್ಟವಾಗಿರುವ ಬಗ್ಗೆ ಅಂದಾಜು ಮಾಡಲಾಗಿದೆ.