ಗಾಲ್ವಾನ್ ಸಂಘರ್ಷ ಭಾರತ-ಚೀನಾ ವಾಕ್ಸಮರ

ನವದೆಹಲಿ,ಸೆ.೨೫- ಅಮೆರಿಕದಲ್ಲಿ ಇಂಡೋ ಫೆಸಿಫಿಕ್ ಪ್ರದೇಶದ ಭದ್ರತೆ ಕುರಿತಂತೆ ಕ್ವಾಡ್ ಸಭೆ ಆರಂಭಕ್ಕೂ ಮುನ್ನ ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯ ಸೇನಾ ಸಂಘರ್ಷ ಕುರಿತಂತೆ ವಾಕ್ಸಮರ ನಡೆದಿದ್ದು, ಸಂಘರ್ಷಕ್ಕೆ ಭಾರತೀಯ ಸೇನೆ ಕಾರಣ ಎಂದು ಚೀನಾ ದೂಷಿಸಿದೆ. ಆದರೆ. ಈ ಆರೋಪಗಳನ್ನು ಸಾರಾಸಗಟಾಗಿ ಭಾರತ ತಳ್ಳಿ ಹಾಕಿದೆ.
ವಾಸ್ತವ ನಿಯಂತ್ರಣ ರೇಖೆಯಲ್ಲಿ ಶಾಂತಿ ಕಾಯ್ದುಕೊಳ್ಳುವ ಸಂಬಂಧ ಚೀನಾ ಮತ್ತು ಭಾರತದ ನಡುವೆ ಸರಣಿ ಒಪ್ಪಂದಗಳಿಗೆ ಅಂಕಿತ ಹಾಕಿವೆ.
ಈ ಒಪ್ಪಂದಗಳು ಗಡಿ ಪ್ರದೇಶದಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪ್ರಮುಖಪಾತ್ರ ವಹಿಸಿದೆ ಎಂದು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ಜಾವೊ ಲಿಜಿಯಾನ್ ತಿಳಿಸಿದ್ದಾರೆ.
ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಮತ್ತು ಚೀನಾ ನಡುವಣ ಸಂಘರ್ಷಕ್ಕೆ ಭಾರತ ಒಪ್ಪಂದವನ್ನು ಉಲ್ಲಂಘಿಸಿದ್ದೇ ಕಾರಣವಾಗಿದೆ. ಅಕ್ರಮವಾಗಿ ಎನ್‌ಎಸಿ ದಾಟಿದ್ದ ಭಾರತ, ಚೀನಾ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು. ಉಭಯ ದೇಶಗಳು ಮಾಡಿಕೊಂಡಿರುವ ಒಪ್ಪಂದಗಳಿಗೆ ಭಾರತ ಬದ್ಧವಾಗಿರಬೇಕು ಮತ್ತು ಗಡಿ ಪ್ರದೇಶದಲ್ಲಿ ಶಾಂತಿ ಸ್ಥಿರತೆ ಕಾಪಾಡಿಕೊಳ್ಳುವುದನ್ನು ಚೀನಾ ನಿರೀಕ್ಷಿಸುತ್ತಿದೆ ಎಂದು ಹೇಳಿದ್ದಾರೆ.
ಚೀನಾ ಮಾಡಿರುವ ಆರೋಪಗಳಿಗೆ ಭಾರತ ಖಾರವಾಗಿ ಪ್ರತಿಕ್ರಿಯಿಸಿದ್ದು, ಭಾರತೀಯ ಸೇವೆಯ ಮೇಲೆ ಆರೋಪ ಹೊರಿಸುವ ಬೀಜಿಂಗ್ ಪ್ರಯತ್ನವನ್ನು ತಳ್ಳಿ ಹಾಕಿದ್ದು, ಪೂರ್ವ ಲಡಾಕ್‌ನ ಎಲ್‌ಎಸಿಯಲ್ಲಿ ಕಳೆದ ವರ್ಷ ನಡೆದ ಬೆಳವಣಿಗೆ ಕುರಿತಂತೆ ನಮ್ಮ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಹರಂದಮ್ ವಾಗ್ಚಿ ತಿರುಗೇಟು ನೀಡಿದ್ದಾರೆ.
ಪೂರ್ವ ಲಡಾಕ್‌ನ ಎಲ್‌ಎಸಿ ಉದ್ದಕ್ಕೂ ಉಳಿದಿರುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಕೆಲಸ ಮಾಡಬೇಕು ಎಂಬುದು ಭಾರತದ ಇಚ್ಛೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
೧೫ ತಿಂಗಳ ಹಿಂದೆ ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಾ ಮತ್ತು ಭಾರತದ ಸೈನಿಕರ ಸಂಘರ್ಷದಲ್ಲಿ ೨೦ ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾ ಸೈನಿಕರು ಮೃತಪಟ್ಟಿದ್ದರು.