ಗಾರ್ಬೇಜ್ ಯಾರ್ಡ್ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ


ಹುಬ್ಬಳ್ಳಿ,ಮಾ.4: ಹುಬ್ಬಳ್ಳಿ ನಗರದ ಘನತ್ಯಾಜ್ಯವನ್ನು ಹೇಸಿಗೆಮಡ್ಡಿಗೆ ತಂದು ಸುರಿಯುತ್ತಿದ್ದು, ಇದರಿಂದ ಸ್ಥಳೀಯ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ಕೂಡಲೇ ಇದನ್ನು ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ಕಾರವಾರ ರಸ್ತೆಯಲ್ಲಿರುವ ಹೇಸಿಗೆಮಡ್ಡಿ (ಗಾರ್ಬೇಜ್ ಯಾರ್ಡ್) ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಹೇಸಿಗೆಮಡ್ಡಿ ತೆರವು ಹೋರಾಟ ಸಮಿತಿ ಅಧ್ಯಕ್ಷ ನಾಗರಾಜ್ ಗೌರಿ ನೇತೃತ್ವದಲ್ಲಿ ನಗರದ ಹೊರವಲಯದ ಕಾರವಾರ ರಸ್ತೆಯ ಗಾರ್ಬೇಜ್ ಯಾರ್ಡ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಹು-ಧಾ ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ದಿಕ್ಕಾರ ಕೂಗಿ, ಕಸ ಸರ್ಕಾರಿ ವಾಹನಗಳನ್ನು ತಡೆದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿದಿನ ಕಸಕ್ಕೆ ಬೆಂಕಿ ಹಚ್ಚುವ ಕಾರ್ಯ ಮಾಡಲಾಗುತ್ತದೆ. ಇದರಿಂದ ಬೆಂಕಿಯಿಂದ ಹೊರಸೂಸುವಿಕೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಅಸ್ತಮಾ, ದಮ್ಮು, ಚರ್ಮ ಸಮಸ್ಯೆ, ಉಸಿರಾಟದ ಸಮಸ್ಯೆ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಸ್ಥಳೀಯರಿಗೆ ಎದುರಾಗುತ್ತಿವೆ.
ಜತೆಗೆ ನಾಯಿಗಳ ಉಪಟಳ ಹೆಚ್ಚಾಗಿದ್ದು, ಜತೆಗೆ ಸತ್ತ ಪ್ರಾಣಿಗಳ ಮಾಂಸವನ್ನು ಶ್ವಾನಗಳು ಮನೆಗಳತ್ತ ತಂದು ಹಾಕುತ್ತಿವೆ. ಇದರಿಂದ ದುರ್ವಾಸನೆಯಿಂದ ಊಟ, ಉಪಚಾರ ಮಾಡುವುದು ಹೇಗೆ ಎಂಬ ಪ್ರಶ್ನೆ ಮಾಡುತ್ತಿದೆ. ಹೀಗಾಗಿ ಕೂಡಲೇ ಹೇಸಿಗೆಮಡ್ಡಿಯನ್ನು ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡಲೇ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು, ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಪಾಲಿಕೆಗೆ ಎಚ್ಚರಿಕೆ ನೀಡಿದರು.