ಗಾರಂಪಳ್ಳಿಯಲ್ಲಿ 24ರಂದು ರಥೋತ್ಸವ, ಧಾರ್ಮಿಕ ಸಭೆ

ಕಲಬುರಗಿ:ಎ.18:ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮದ ಶ್ರೀ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನ ಆವರಣದಲ್ಲಿ 19ರಂದು ಬೆಳಗ್ಗೆ 11-30ಕ್ಕೆ ಬೃಹತ್ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್‍ನ ಗೌರವಾಧ್ಯಕ್ಷ ವೀರಭದ್ರಪ್ಪ ಮಲ್ಕೂಡ ಹಾಗೂ ಅಧ್ಯಕ್ಷ ಗುರುಪ್ರಸಾದ ಅಂಬಲಗಿ ಜಂಟಿಯಾಗಿ ತಿಳಿಸಿದ್ದಾರೆ.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶ್ರೀ ಬಸವೇಶ್ವರ ಮತ್ತು ಸಾರ್ವಜನಿಕ ಆಸ್ಪತ್ರೆ ಕಲಬುರಗಿ ಹಾಗೂ ಸಮಸ್ತ ಗಾರಂಪಳ್ಳಿ ಗ್ರಾಮಸ್ಥರು ಹಾಗೂ ಶ್ರೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡ ಈ ಶಿಬಿರವನ್ನು ನಿಡಗುಂದಾದ ಕಂಚಾಳಕುಂಟಿ ಮಠದ ಪೂಜ್ಯ ಶ್ರೀ ಕರುಣೇಶ್ವರ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಮಹಾದೇವಪ್ಪ ರಾಂಪುರೆ, ಸಮುದಾಯ ಔಷಧ ವಿಭಾಗದ ಮುಖ್ಯಸ್ಥ ಡಾ.ಕವಿರಾಜ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ವಹಿಸಲಿದ್ದಾರೆ ಎಂದು ಅವರು ಹೇಳಿದರು.

ಶಿಬಿರದಲ್ಲಿ ಕಣ್ಣು, ಮೂಗು, ಕಿವಿ ಮತ್ತು ಗಂಟಲು, ಮೊಳಕಾಲು ನೋವು, ಮಂಡಿ ನೋವು, ವಿಶೇಷವಾಗಿ ಮಹಿಳೆಯರಿಗೆ ಸಂಬಂಧಿಸಿದ ಕಾಯಿಲೆ ಮತ್ತು ಹೃದಯ ಬಡಿತ, ಸಕ್ಕರೆ ಕಾಯಿಲೆ ಮತ್ತು ಬಿಪಿಯನ್ನು ತಜ್ಞ ವೈದ್ಯರಿಂದ ಪರಿಶೀಲಿಸಲಾಗುವುದು. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗಾರಂಪಳ್ಳಿ ಸೇರಿ ಗ್ರಾಮದ ಸುತ್ತಲಿನ ಹತ್ತಾರು ಹಳ್ಳಿಯ ಜನರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.

ಈಗಾಗಲೇ ಜಾತ್ರಾ ಮಹೋತ್ಸವ ನಿಮಿತ್ತ 15ರಿಂದ ಪ್ರವಚನ ಆರಂಭವಾಗಿದ್ದು, 19ರಂದು ಸಮಾರೋಪಗೊಳ್ಳಲಿದೆ. ಅಲ್ಲದೆ ತುಮಕೂರು ಸಿದ್ಧಗಂಗಾ ಮಠದ ಪೂಜ್ಯ ಡಾ.ಶಿವಕುಮಾರ ಮಹಾಶಿವಯೋಗಿಗಳ 116ನೇ ಗುರುವಂದನಾ ಕಾರ್ಯಕ್ರಮ ಕೂಡ ಅಂದು ಸಂಜೆ ಹಮ್ಮಿಕೊಳ್ಳಲಾಗಿದೆ. ಅಂದು ರಾತ್ರಿ 8ಕ್ಕೆ ದೇವಸ್ಥಾನದಿಂದ ಗ್ರಾಮಕ್ಕೆ ಪಲ್ಲಕ್ಕಿ ಹೊರಡುವುದು. 22ರಂದು ಅಗ್ನಿಕುಂಡಕ್ಕೆ ನೈವೇದ್ಯ, 23ಕ್ಕೆ ಘೂಳಿ ಮೆರವಣಿಗೆ 24ರಂದು ಬೆಳಗ್ಗೆ ಉಚ್ಚಾಯಿ ಮೆರವಣಿಗೆ ಸಂಜೆ 6ಕ್ಕೆ ರಥೋತ್ಸವ ನಂತರ ನಡೆಯುವ ಬೃಹತ್ ಧಾರ್ಮಿಕ ಸಭೆಯನ್ನು ಬಳ್ಳಾರಿಯ ಕಮ್ಮರಛೇಡ್ ಮಠದ ಶ್ರೀ ಕಲ್ಯಾಣ ಮಹಾಸ್ವಾಮಿಗಳು ಉದ್ಘಾಟಿಸಲಿದ್ದಾರೆ. ನಿಡಗುಂದಾದ ಶ್ರೀ ಕರುಣೇಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಅಲ್ಲದೆ ಗ್ರಾಮದ ಮುಖಂಡರು ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. 25ರಂದು ಬೆಳಗ್ಗೆ 7-30ಕ್ಕೆ ಜಂಗಿ ಕುಸ್ತಿ ನಡೆಯಲಿದೆ.