ಗಾಯನ ಸ್ಪರ್ಧೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಆ19: 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ಟಾರ್ ಆಫ್ ಲಕ್ಷ್ಮೇಶ್ವರ ವತಿಯಿಂದ ಇಲ್ಲಿನ ಚೆನ್ನಮ್ಮನ ವನ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸರಿಗಮಪ ರಾಗ ರಂಜನಿ ಗಾಯನ ಸ್ಪರ್ಧೆ ಸೀಜನ್-1 ಹಾಗೂ ವೀರ ಯೋಧರು, ರೈತರಿಗೆ ಸನ್ಮಾನ ಸಮಾರಂಭ ನಡೆಯಿತು. ಧರ್ಮೋ ರಕ್ಷತಿ ರಕ್ಷಿತಃ ಫೌಂಡೇಷನ್, ಎಂಜಿಎಂ ಫೌಂಡೇಶನ್ ಮತ್ತು ನೇತಾಜಿ ಯುವಕ ಮಂಡಳ, ಡಾ.ಪುನಿತ್ ರಾಜಕುಮಾರ ಅಬಿಮಾನಿ ಬಳಗ ಮತ್ತು ಶಾರದಾ ಸ್ವರಂಜಾಲೀ ಸಂಗೀತ ಪಾಠ ಶಾಲೆ ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ಜರುಗಿತು.
ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಕಾರ್ಯಕ್ರಮ ಉದ್ಘಾಟಿಸಿ ಸಂಗೀತ ಎಲ್ಲರಿಗೂ ಅಚ್ಚುಮೆಚ್ಚು. ಸಂಗೀತಕ್ಕೆ ಸೋಲುವ ಮನವೇ ಇಲ್ಲ. ಸಂಗೀತ ಆಲಿಸುವುದರಿಂದ ಅಶಾಂತಿಗೊಂಡ ಮನಸ್ಸಿಗೆ ಶಾಂತಿ, ಸಮಾಧಾನ ದೊರೆಯುತ್ತದೆ. ಕಾರಣ ಎಲ್ಲರೂ ತಪ್ಪದೇ ಪ್ರತಿದಿನ ಉತ್ತಮ ಸಂಗೀತ ಆಲಿಸಿದರೆ ಆರೋಗ್ಯ ಸುಧಾರಿಸುತ್ತದೆ' ಎಂದ ಅವರುಸರಿಗಮಪ ರಾಜ ರಂಜನಿ ಮೂಲಕ ಮಕ್ಕಳಲ್ಲಿನ ಪ್ರತಿಭೆ ಹೊರಗೆ ತರುವಲ್ಲಿ ಸ್ಟಾರ್ ಆಫ್ ಲಕ್ಷ್ಮೇಶ್ವರ ಸಂಘಟನೆ ಶ್ರಮಿಸುತ್ತಿರುವುದು ಶ್ಲಾಘನೀಯ’ ಎಂದರು.
ಶಾಸಕ ಡಾ.ಚಂದ್ರು ಲಮಾಣಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಧರ್ಮೋ ರಕ್ಷತಿ ರಕ್ಷಿತಃ ಫೌಂಡೇಷನ್ ಅಧ್ಯಕ್ಷ ಮಂಜುನಾಥ ಹೊಗೆಸೊಪ್ಪಿನ, ಎಂಜಿಎಂ ಫೌಂಡೇಷನ್ ಅಧ್ಯಕ್ಷ ಬಸವೇಶ ಮಹಾಂತಶೆಟ್ಟರ, ಚಂಬಣ್ಣ ಬಾಳಿಕಾಯಿ, ಬಿ.ಎಸ್. ಬಾಳೇಶ್ವರಮಠ, ನಿಂಗಪ್ಪ ಬನ್ನಿ, ಸ್ಟಾರ್ ಆಫ್ ಲಕ್ಷ್ಮೇಶ್ವರ ಸಂಘಟನೆ ಸಂಚಾಲಕ ಸಯ್ಯದ್ ಮೆಹಬೂಬ್ ಹುಸೇನ್, ಮಹೇಶ ಹೊಗೆಸೊಪ್ಪಿನ ಮತ್ತಿತರರು ಇದ್ದರು.
ಸರಿಗಮಪ ರಾಗ ರಂಜನಿ ಸ್ಪರ್ಧೆಯಲ್ಲಿ ಪಂಚಮಿ ಅಂಬಿಗರ ಲಕ್ಷ್ಮೇಶ್ವರ ಪ್ರಥಮ, ಶ್ರೀಲಕ್ಷ್ಮೀ ಪಾಟೀಲ ಲಕ್ಷ್ಮೇಶ್ವರ ದ್ವಿತೀಯ ಮತ್ತು ತೃತೀಯ ನರಗುಂದದ ಮಹೇಶ ಹೂಗಾರ ಪಡೆದುಕೊಂಡರು. ನಂತರ ಮಾಜಿ ಸೈನಿಕರು, ರೈತರನ್ನು ಸನ್ಮಾನಿಸಲಾಯಿತು.