ಗಾಯನ ಸಮಾಜದ ಸಂಗೀತ ಸಮ್ಮೇಳನಾಧ್ಯಕ್ಷರಾಗಿ ಸೂರ್ಯ ಆಯ್ಕೆ

ಬೆಂಗಳೂರು, ಡಿ. ೪- ಬೆಂಗಳೂರು ಗಾಯನ ಸಮಾಜದ ೫೧ನೇ ರಾಷ್ಟ್ರೀಯ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಅಂತಾರಾಷ್ಟ್ರೀಯ ಖ್ಯಾತೀಯ ಸಂಗೀತ ತಜ್ಞ, ಕಲಾ ವಿಮರ್ಶಕ ಮತ್ತು ಅಂಕಣಕಾರ ಡಾ. ಎಂ. ಸೂರ್ಯ ಪ್ರಸಾದ್ ಅವರು ಆಯ್ಕೆಯಾಗಿದ್ದಾರೆ.
ನಾಳೆಯಿಂದ ಡಿ. ೧೨ ರವರೆಗೆ ಡಾ. ಎಂ. ಸೂರ್ಯಪ್ರಸಾದ್ ಅವರ ನೇತೃತ್ವದಲ್ಲಿ ೮ ದಿನಗಳ ಕಾಲ ಪ್ರಸಿದ್ಧ ಸಂಗೀತ ವಿದ್ವಾಂಸರುಗಳಿಂದ ಸೋದಾಹರಣ ಭಾಷಣಗಳು, ಪ್ರಾತ್ಯಕ್ಷಿಕೆಗಳು, ವಿಚಾರಗೋಷ್ಠಿಗಳು ನಡೆಯಲಿದೆ. ಪ್ರತಿದಿನ ಸಂಜೆ ಉದಯೋನ್ಮುಖ ಕಲಾವಿದರುಗಳಿಂದ ಸಂಗೀತ ಕಛೇರಿಗಳನ್ನು ಏರ್ಪಡಿಸಲಾಗಿದೆ.
ಡಿ. ೧೨ ರಂದು ಸಮಾರೋಪ ಸಮಾರಂಭ ಗಾಯನ ಸಮಾಜದಲ್ಲಿ ನಡೆಯಲ್ಲಿದ್ದು ಸಚಿವರುಗಳಾದ ಆರ್. ಅಶೋಕ್, ಸುನಿಲ್ ಕುಮಾರ್, ಕೇಂದ್ರ ಸಚಿವ ಕೃಷ್ಣರೆಡ್ಡಿ, ಸಂಸ್ಕಾರ ಭಾರತೀಯ ಸಂಘಟನಾ ಕಾರ್ಯದರ್ಶಿ ಪ.ರಾ. ಕೃಷ್ಣಮೂರ್ತಿ, ಕೆ. ಶಾಂತಕುಮಾರ್ ಯದುಗಿರಿ ಯತಿರಾಜ ರಾಮಾನುಜ ನಾರಾಯಣ ಜೇಯರ್ ಸ್ವಾಮೀಜಿ, ತುಮಕೂರಿನ ಶ್ರೀ ರಾಮಕೃಷ್ಣ ಮಠದ ಶ್ರೀ ವೀರೇಶಾನಂದ ಸ್ವಾಮೀಜಿಗಳು ಅತಿಥಿಯಾಗಿ ಆಗಮಿಸಲಿದ್ದಾರೆ.
ಸಂಗೀತ -ನೃತ್ಯ, ಕಲಾ ವಿಮರ್ಶಕ, ಭಾಷಾ ವಿದ್ವಾಂಸ, ಶಿಕ್ಷಣ ತಜ್ಞ- ಹೀಗೆ ಹಲವು ಮಜಲುಗಳ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ವಿದ್ವಾಂಸ ಡಾ. ಎಂ. ಸೂರ್ಯ ಪ್ರಸಾದ್, ಸೃಜನಾತ್ಮಕವಾದ ತಮ್ಮ ಲೇಖನ ಹಾಗೂ ಕಾರ್ಯಗಳಿಂದ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮದೇ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ.
ರಾಜ್ಯ ಭಾಷೆ ಕನ್ನಡ, ರಾಷ್ಟ್ರಭಾಷೆ ಹಿಂದಿ ಮತ್ತು ಅಂತಾರಾಷ್ಟ್ರೀಯ ಭಾಷೆ ಇಂಗ್ಲಿಷ್‌ಗಳಲ್ಲಿ ಪಾಂಡಿತ್ಯ ಹೊಂದಿದ್ದು ತ್ರಿಭಾಷಾ ವಿದ್ವಾಂಸ ಎಂದು ಗೌರವಿಸಲ್ಪಡುತ್ತಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಗಾಯನ ಮತ್ತು ಪಿಟೀಲು ವಾದನದಲ್ಲಿ ಸ್ವತಃ ವಿದ್ವತ್ ಗಳಿಸಿದ್ದು, ಶಾಸ್ತ್ರೀಯ ನೃತ್ಯಗಳ ಬಗೆಗೆ ಸಮಗ್ರ ಅಧ್ಯಯನ ಮಾಡಿದ್ದಾರೆ.
ಲಂಡನ್ ಭಾರತೀಯ ವಿದ್ಯಾಭವನವೂ ಸೇರಿದಂತೆ ಹಲವಾರು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಮತ್ತು ಸಂಗೀತ ಮತ್ತು ನೃತ್ಯ ಸಂಘ-ಸಂಸ್ಥೆಗಳ ವಿಚಾರ ಸಂಕಿರಣಗಳಲ್ಲಿ ಸಂಪನ್ಯೂಲ ವ್ಯಕ್ತಿಯಾಗಿ, ಪ್ರತಿನಿಧಿಯಾಗಿ, ಮುಖ್ಯ ಅತಿಥಿಯಾಗಿ, ಅಧ್ಯಕ್ಷರಾಗಿ ಭಾಗವಹಿಸುತ್ತಾ ಶಿಬಿರಗಳು, ಕಾರ್ಯಾಗಾರಗಳು ಮತ್ತು ಸೋದಹರಣ ಭಾಷಣಗಳನ್ನು ಪ್ರಸ್ತುತಪಡಿಸಿದ್ದಾರೆ. ಗ್ವಾಲಿಯರ್‌ನಲ್ಲಿ ನಡೆಯುವ ವಾರ್ಷಿಕ ತಾನ್‌ಸೇನ್ ಸಂಗೀತ ಸಮ್ಮೇಳನ ಮತ್ತು ಖಜುರಾಹೋನಲ್ಲಿ ನಡೆಯುವ ವಾರ್ಷಿಕ ಅಂತಾರಾಷ್ಟ್ರೀಯ ನೃತ್ಯ ಮಹೋತ್ಸವಗಳ ವಿಶೇಷ ಆಹ್ವಾನಿತ ಸಮೀಕ್ಷಕರಾಗಿ ಪ್ರತಿವರ್ಷ ಭಾಗವಹಿಸುತ್ತಾ ಬಂದಿದ್ದಾರೆ.

ತಮ್ಮ ವಿಶೇಷ ಕಲಾಸೇವೆಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗಳ ಸಾಧಕರಾಗಿರುವ ಶ್ರೀಯುತರು, ಆಕಾಶವಾಣಿ ಮತ್ತು ದೂರದರ್ಶನ ಆಡಿಷನ್ ಸಮಿತಿಯ ಸದಸ್ಯರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಲವು ಪ್ರಶಸ್ತಿ ಪುರಸ್ಕಾರಗಳ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ೨೦೦೫ರಲ್ಲಿ ಬೆಂಗಳೂರು ಗಾಯನ ಸಮಾಜದಿಂದ ಹಾಗೂ ೨೦೧೨ರಲ್ಲಿ ಕರ್ನಾಟಕ ಗಾನಕಲಾ ಪರಿಚತ್ತಿನಿಂದ ವರ್ಷದ ಕಲಾವಿದ ಗೌರವವನ್ನು ಸ್ವೀಕರಿಸಿದ್ದಾರೆ.

ಮಠ, ಮಂತ್ರಾಲಯ ಶ್ರೀ ರಾಘವೇಂದ್ರ ಮಠ, ಶ್ರೀ ಅವನೀ ಶೃಂಗೇರಿ ಶಂಕರ ಮಠ ಮುಂತಾದ ಧಾರ್ಮಿಕ ಕೇಂದ್ರಗಳಿಂದಲೂ ಪುರಸ್ಕರಿಸಲ್ಪಟ್ಟಿದ್ದಾರೆ. ಉಳಿದಂತೆ ಕಲಾಭೂಷಣ,ಲಲಿತಾ ವಿಶಾರದ, ವಿಮರ್ಶಾ ವಿಚಕ್ಷಣ, ವಿಮರ್ಶಾ ವಾಚಸ್ಪತಿ, ಸಾಹಿತ್ಯ ಕಲಾ ವಿಮರ್ಶಕ ಮಾಣಿಕ್ಯ, ಕಲಾರತ್ನ- ಮುಂತಾಗಿ ಬಹಳಷ್ಟು ಪ್ರತಿಷ್ಟಿತ ಪುರಸ್ಕಾರಗಳಿಂದ ಸನ್ಮಾನಿತರಾಗಿರುವ ಸಹೃದಯಿ ವಿದ್ವಾಂಸರು ಡಾ.ಎಂ. ಸೂರ್ಯ ಪ್ರಸಾದ್.

ಡಿ.೫- ರಿಂದ ೧೨ ರವರೆಗೆ ನಡೆಯಲಿರುವ ೧೧೬ ವರ್ಷದ ಪ್ರತಿಷ್ಠಿತ ಬೆಂಗಳೂರು ಗಾಯನ ಸಮಾಜದ ಮಹತ್ವಪೂರ್ಣ ೫೧ನೇ ವಾರ್ಷಿಕ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವ ಡಾ.ಎಂ.ಸೂರ್ಯ ಪ್ರಸಾದ್ ಅವರಿಗೆ ೧೨ನೇ ಡಿಸೆಂಬರ್ ಭಾನುವಾರದಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಗೀತ ಕಲಾ ರತ್ನ ಬಿರುದುನೊಂದಿಗೆ ನಗದು, ಶಾಲು, ಫಲ-ಪುಷ್ಪಾದಿಗಳನ್ನು ನೀಡಿ ಗೌರವಿಸಲಾಗುವುದು.