ಗಾಯದ ಸಮಸ್ಯೆಯಿಂದ ಬ್ರಿಟನ್ ಗೇಮ್ಸ್‌ನಿಂದ ಹೊರಕ್ಕೆ

ದೆಹಲಿ, ಜು.೨೭- ಗಾಯದ ಸಮಸ್ಯೆಯಿಂದ ಮುಂದೆ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ನಡೆಯಲಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿಯಲು ತೀರ್ಮಾನಿಸಿ, ಸಹಜವಾಗಿಯೇ ದೇಶದ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದ ಭಾರತದ ಖ್ಯಾತ ಜ್ಯಾವೆಲಿನ್ ಥ್ರೋವರ್ ನೀರಜ್ ಛೋಪ್ರಾ ಇದೀಗ ತನ್ನ ಕಠಿಣ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಛೋಪ್ರಾ, ಎಲ್ಲರಿಗೂ ನಮಸ್ಕಾರ, ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಾನು ದೇಶವನ್ನು ಪ್ರತಿನಿಧಿಸಲು ಸಾಧ್ಯವಾಗುವುದಿಲ್ಲ ಎಂದು ನಿಮಗೆ ತಿಳಿಸಲು ನನಗೆ ತುಂಬಾ ನಿರಾಶೆಯಾಗಿದೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಎಸೆತದ ಸಮಯದಲ್ಲಿ ನನ್ನ ತೊಡೆಸಂದು ಎಳೆದ ನಂತರ ನಾನು ತೀವ್ರ ರೀತಿಯ ಸಂಕಷ್ಟ ಅನುಭವಿಸಿದ್ದೇನೆ. ನಿನ್ನೆ ಅಮೆರಿಕಾದ ವೈದ್ಯರು ವೈದ್ಯಕೀಯವಾಗಿ ತಪಾಸಣೆ ನಡೆಸಿದಾಗ ಒಂದು ಸಣ್ಣ ಸ್ಟ್ರೈನ್ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ನನಗೆ ಪುನರ್ವಸತಿಗೆ ಒಳಗಾಗಲು ಮತ್ತು ಮುಂದಿನ ಕೆಲವು ವಾರಗಳವರೆಗೆ ವಿಶ್ರಾಂತಿ ನೀಡಲು ಸಲಹೆ ನೀಡಿದ್ದಾರೆ. ನನ್ನ ಗಾಯದ ಸಮಸ್ಯೆ ಬಗ್ಗೆ ಈಗಾಗಲೇ ನಾನು ಎಎಫ್‌ಐ, ಐಒಎ (ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್), ಎಸ್‌ಎಐ (ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ)ನ ಸಿಎಐಎಮ್‌ಎಸ್ ಜೊತೆ ಚರ್ಚೆ ನಡೆಸಿದ್ದೇನೆ. ಗಾಯದ ಸಮಸ್ಯೆ ಮತ್ತಷ್ಟು ಉಲ್ಬಣವಾಗುವ ಮುಂಚೆ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿಯುವುದು ಒಳಿತೆಂಬ ನಿರ್ಧಾರಕ್ಕೆ ಬರಲಾಗಿದೆ. ಪ್ರಶಸ್ತಿಯನ್ನು ಉಳಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸಲು ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ನೋವಿದೆ. ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ಧ್ವಜಧಾರಿಯಾಗಿ ಅವಕಾಶ ಕಳೆದುಕೊಂಡದ್ದಕ್ಕೆ ವಿಶೇಷವಾಗಿ ನಿರಾಶೆಗೊಂಡಿದ್ದೇನೆ ಎಂದು ಭಾವುಕವಾಗಿ ಪೋಸ್ಟ್ ಮಾಡಿದ್ದಾರೆ. ಅಮೆರಿಕಾದ ಯೂಜೆನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಬೆಳ್ಳಿಯ ಪದಕ ಪಡೆದು ಇತಿಹಾಸ ನಿರ್ಮಿಸಿದ್ದರು. ಆದರೆ ಬಳಿಕ ಗಾಯದ ಸಮಸ್ಯಗೆ ಸಿಲುಕಿದ ಹಿನ್ನೆಲೆಯಲ್ಲಿ ಮುಂದೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿಯಲು ನಿರ್ಧಾರಕ್ಕೆ ನೀರಜ್ ಬಂದಿದ್ದಾರೆ.