ಗಾಯತ್ರಿ ಸೇವಾ ಟ್ರಸ್ಟ್ ನಿಂದ ಆಹಾರ ವಿತರಣೆ

ಬಳ್ಳಾರಿ,ಮೇ.30- ಕೊರೋನಾ ಸೋಂಕಿಗೆ ಒಳಗಾದವರ ಪೋಷಕರಿಗೆ ನಗರದ ಗಾಯತ್ರಿ ಸೇವಾ ಟ್ರಸ್ಟ್ ನಿಂದ ಆಹಾರ ಒದಗಿಸುವ ಮೂಲಕ ಮಾನವೀಯತೆ ತೋರುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಟಿ.ಗಂಗಾಧರಗೌಡ ಪ್ರಶಂಸೆ ವ್ಯಕ್ತಪಡಿಸಿದರು.
ಅವರು ಇಂದು ವಿಮ್ಸ್ ನ ಹಳೇ ನಿರ್ದೇಶಕರ ಕಚೇರಿಯ ಕೋವಿಡ್ ಕೇರ್ ಸೆಂಟರ್ ನಲ್ಲಿ ಇರುವ 38 ಕೊರೊನಾ ಹಾಗೂ ಬ್ಲಾಕ್ ಫಂಗಸ್ ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಬಂಧುಗಳಿಗೆ ಆಹಾರ ಪೊಟ್ಟಣ ವಿತರಿಸಿ ಮಾತನಾಡಿದರು.
ವಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಅಶ್ವಿನ್ ಕುಮಾರ್ ಸಿಂಗ್ ಮಾತನಾಡಿ, ಶ್ರೀ ಗಾಯತ್ರಿ ಸೇವಾ ಟ್ರಸ್ಟ್, ಶ್ರೀ ಶಂಕರ ಮಠಕ್ಕೆ ತನ್ನದೇ ಆದ ಸಾಮಾಜಿಕ, ಧಾರ್ಮಿಕ, ಮಾನವೀಯ ಮೌಲ್ಯಗಳಿವೆ. ಇಂದಿನ ಕ್ಲಿಷ್ಟಕರ ಸನ್ನಿವೇಶದಲ್ಲಿ ರೋಗಿಗಳ ಕುಟುಂಬದವರಿಗೆ ಶುಚಿ, ರುಚಿಯಾದ ಆಹಾರ ನೀಡುವುದು ಶ್ಲಸಘನೀಯ ಕಾರ್ಯ. ಲಾಕ್ ಡೌನ್ ವೇಳೆ ಬಳ್ಳಾರಿ ಗ್ರಾಮಾಂತರ ಪ್ರದೇಶದಿಂದ ಬಂದಿರುವ ರೋಗಿಗಳ ಸಂಬಂಧಿಕರಿಗೆ ಇದರಿಂದ ಉಪಕಾರವಾದಂತಾಗಿದೆ ಎಂದರು.
ವಿಮ್ಸ್ ನ ಸೀನಿಯರ್ ಲ್ಯಾಬ್ ಟೆಕ್ನಿಷಿಯನ್ ಡಾ.ಕಿರಣ್ ಯಾದವಾಡ, ಬಿ.ಗುರುರಾಜ ಈ ಕಾರ್ಯಕ್ರಮಕ್ಕೆ ಸಹಕರಿಸಿದರು.
ಶ್ರೀ ಶಂಕರ ಮಠದ ಪ್ರಭಾರಿಗಳಾದ ಬಿ.ಕೆ.ಬಿ.ಎನ್.ಮೂರ್ತಿ, ಮೋಹನ್ ಜೋಯಿಸ್, ಬ್ರಾಹ್ಮಣ ಒಕ್ಕೂಟದ ಕಾರ್ಯದರ್ಶಿ ಡಾ.ಬಿ.ಕೆ.ಸುಂದರ್, ಶ್ರೀ ಗಾಯತ್ರಿ ಸೇವಾ ಟ್ರಸ್ಟ್ ನ ಅಧ್ಯಕ್ಷರು ಆಗಿರುವ ಪಾಲಿಕೆಯ ಮಾಜಿ ಸದಸ್ಯ ನೇಮಕಲ್ ರಾವ್, ಪದಾಧಿಕಾರಿಗಳಾದ ಸಿಮೆಂಟ್ ಗಿರಿ, ನಾಗೇಶ್, ಅನಂತಾಚಾರ್, ಸುರೇಂದ್ರ ಮತ್ತಿತರರು ಇದ್ದರು.