ಗಾನ ಗಂಧರ್ವ ಎಸ್ಪಿಬಿ ಪ್ರಥಮ ಪುಣ್ಯಸ್ಮರಣೆ

ಬೆಂಗಳೂರು, ಸೆ ೨೫- ಗಾನ ಗಾರುಡಿಗ ಭಾರತೀಯ ಚಿತ್ರರಂಗದ ಮೇರು ಗಾಯಕ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ನಿಧನರಾಗಿ ಇಂದಿಗೆ ಒಂದು ವರ್ಷವಾಗಿದ್ದು, ಇಂದು ದೇಶದೆಲ್ಲೆಡೆ ಎಸ್ ಪಿಬಿ ಅವರ ಪ್ರಥಮ ಪುಣ್ಯಸ್ಮರಣೆ ಆಚರಿಸಲಾಗುತ್ತಿದೆ.

ಕಳೆದ ವರ್ಷ ಸೆ. ೨೫ ರಂದು ಎಸ್ಪಿಬಿ ತಮ್ಮ ೭೪ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ಕಳೆದ ವರ್ಷ ಆಗಸ್ಟ್ ೫ರಂದು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಅವರಿಗೆ ಗರಿಷ್ಠ ಲೈಫ್ ಸಪೋರ್ಟ್ ನೀಡಲಾಗಿತ್ತು. ಆದರೂ ಗಾನ ಗಂಧರ್ವನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಇಹಲೋಕದ ಯಾತ್ರೆ ಮುಗಿಸಿದರು. ಸಂಗೀತ ದಿಗ್ಗಜ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅಗಲಿಕೆಯ ನೋವು ಇಡೀ ದೇಶವನ್ನೇ ಆವರಿಸಿತ್ತು.

೧೯೪೬ರ ಜೂನ್ ೪ರಂದು ಎಸ್.ಪಿ. ಬಾಲಸುಬ್ರಹ್ಮಣ್ಯಂ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದರು. ತಂದೆ ಸಾಂಬಮೂರ್ತಿ ಹರಿಕಥಾ ವಿದ್ವಾಂಸರು, ತಾಯಿ ಶಕುಂತಲಮ್ಮ.
ಇಂಜಿನಿಯರಿಂಗ್ ಮಾಡಿದ್ದ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕಾಲೇಜು ದಿನಗಳಲ್ಲೇ ಸಂಗೀತ ಲೊಕದತ್ತ ಆಕರ್ಷಿತರಾಗಿದ್ದರು. ಕಾಲೇಜಿನಲ್ಲಿ ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ಅವರು, ಮೊದಮೊದಲು ಪಿ.ಬಿ. ಶ್ರೀನಿವಾಸ್ ಅವರ ಹಾಡುಗಳನ್ನು ಅದ್ಭುತವಾಗಿ ಹಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಕಲೆಯನ್ನು ಮೊದಲಿಗೆ ಗುರುತಿಸಿದ್ದು ಸಂಗೀತ ನಿರ್ದೇಶಕ ಕೋದಂಡಪಾಣಿ ಅವರು.

೧೯೬೬ರಲ್ಲಿ “ಶ್ರೀ ಶ್ರೀ ಮರ್ಯಾದ ರಾಮಣ್ಣ” ಎಂಬ ತೆಲುಗು ಸಿನಿಮಾ ಮೂಲಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಚಲನಚಿತ್ರ ಗಾಯನ ಕ್ಷೇತ್ರಕ್ಕೆ ಕಾಲಿಟ್ಟರು. ಅದೇ ವರ್ಷ ಅವರು “ನಕ್ಕರೆ ಅದೇ ಸ್ವರ್ಗ” ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದರು. ಇದಾದ ಮೇಲೆ “ಹೋಟೆಲ್ ರಾಮಣ್ಣ” ಎಂಬ ಸಿನಿಮಾ ಮೂಲಕ ತಮಿಳು ಚಿತ್ರರಂಗವನ್ನು ಪ್ರವೇಶಿಸಿದ್ದರು

ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ ೪೦ ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಎಸ್ಪಿಬಿ ಹಾಡಿದ್ದಾರೆ. ನಾಲ್ಕು ಭಾಷೆಗಳಲ್ಲಿ ಒಟ್ಟು ೬ ರಾಷ್ಟ್ರ ಪ್ರಶಸ್ತಿಗಳು, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿ, ಸುಮಾರು ೨೫ ಬಾರಿ ಆಂಧ್ರ ಪ್ರದೇಶದ ಪ್ರತಿಷ್ಠಿತ ನಂದಿ ಪ್ರಶಸ್ತಿ, ಹಲವು ವಿಶ್ವ ವಿದ್ಯಾಲಯಗಳಿಂದ ಡಾಕ್ಟರೇಟ್, ನಟ, ಕಂಠದಾನ ಕಲಾವಿದ, ನಿರ್ಮಾಪಕ ಹೀಗೆ ಎಸ್.ಪಿ. ಬಾಲಸ್ರುಬ್ರಹ್ಮಣ್ಯಂ ಮಾಡಿರುವ ಸಾಧನೆಗಳಿಗೆ ಲಭಿಸಿರುವ ಗೌರವಗಳು ಅನೇಕ.

ಎಸ್ಪಿ ಬಾಲಸುಬ್ರಮಣ್ಯಂ ಅವರು ಗಾಯನದ ಜೊತೆಗೆ ನಟನೆಯಲ್ಲೂ ಹೆಚ್ಚು ಆಸಕ್ತಿ ತೋರಿದ್ದರು. ಎಸ್ಪಿಬಿ ಅವರು ವಿವಿಧ ಭಾಷೆಯ ೭೨ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಎಸ್ಪಿಬಿ ಭೌತಿಕವಾಗಿ ಇಂದು ನಮ್ಮ ಜೊತೆ ಇಲ್ಲದಿದ್ದರೂ ಅವರ ಆದರ್ಶ ಜೀವನ, ಮೇರು ವ್ಯಕ್ತಿತ್ವ, ಅವರ ಕಂಠಸಿರಿಯಿಂದ ಹೊರಹೊಮ್ಮಿದ ಆ ಅದ್ಭುತ ಹಾಡುಗಳು ಇಂದಿಗೂ ಎಲ್ಲಾರ ಮನಮನೆಗಳಲ್ಲಿ ಅಚ್ಚಳಿಯದೇ ಉಳಿದಿವೆ