ಗಾದಿಗನೂರಿನಲ್ಲಿ ಘಟನೆ ಡೆತ್ ನೋಟ್ ಬರೆದು ಮಕ್ಕಳನ್ನು ಸಾಯಿಸಿ ತಾವು ನೇಣು ಬಿಗಿದುಕೊಂಡ ದಂಪತಿ

ಬಳ್ಳಾರಿ, ಜ.06: ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದು ತಮ್ಮಿಬ್ಬರ ಮಕ್ಕಳನ್ನು ಸಾಯಿಸಿ ದಂಪತಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಇಂದು ನಡೆದಿದೆ.
ಜಿಂದಾಲ್ ಕಾರ್ಖಾನೆಯ ಉದ್ಯೋಗಿಯಾಗಿರುವ ಗಾಣಿಗೇರ ನಂಜುಂಡಪ್ಪ (30) ಆತನ ಪತ್ನಿ ಪಾರ್ವತಿ (28) ಮತ್ತು ಅವರ ಮಕ್ಕಳಾದ ದಯಸ್ವರೂಪ (4) ಹಾಗೂ ಗೌತಮಿ (2) ಸಾವನ್ನಪ್ಪಿದವರಾಗಿದ್ದಾರೆ.
ಡೆತ್ ನೋಟಿನಲ್ಲಿ ಸಂಕಷ್ಟದಲ್ಲಿದ್ದ ನಮಗೆ ಹಲವರು ಸಹಾಯ ಮಾಡಲು ಬಂದಿದ್ದರು. ಆದರೂ ಬಗೆಹರಿಯದ ಸಂಕಟದಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ.
ನಮ್ಮ ಕುಟುಂಬದವರೆಲ್ಲ ನಮ್ಮ ನಿರ್ಧಾರವನ್ನು ಕ್ಷಮಿಸುತ್ತಿರೋ ಇಲ್ಲವೋ ಆದರೂ ನಮ್ಮ ಕಾಳಜಿ, ಸೇವೆಗೆ ಧನ್ಯವಾದಗಳು. ಆದರೂ ನಾವು ಸಾವಿಗೆ ನಿರ್ಧಾರ ಮಾಡಿಕೊಂಡಿದ್ದು ಸ್ವಯಂಪ್ರೇರಿತರಾಗಿ ನಮ್ಮ ಮತ್ತು ಮಕ್ಕಳ ಸಾವಿಗೆ ಯಾರೂ ಕಾರಣರಲ್ಲ.
ಗಂಡ ಹೆಂಡತಿ ಇಬ್ಬರು ಸಹಿ ಮಾಡಿದ್ದಾರೆ. ಈ ಬಗ್ಗೆ ಗಾದಿಗನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮನೆಯಲ್ಲಿ ನಾಲ್ವರು ಮಾತ್ರ ವಾಸ ಮಾಡುತ್ತಿದ್ದರಂತೆ ಲಭ್ಯ ಮಾಹಿತಿ ಪ್ರಕಾರ ನಂಜುಂಡಪ್ಪ ಕ್ರಿಕೆಟ್ ಬೆಟ್ಟಿಂಗ್ ಹವ್ಯಾಸದಿಂದ ಬಹಳ ಸಾಲ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಆ ಬಗ್ಗೆ ತನಿಖೆಯಿಂದಲೇ ತಿಳಿಯಬೇಕಿದೆ.
ಈ ದೃಶ್ಯವನ್ನು ನೋಡಿದ ಗ್ರಾಮದ ಜನತೆ ಪಾಪಿಗಳು ಬೇಕಿದ್ದರೆ ತಾವು ಸಾಯಬೇಕಿತ್ತು. ಪಾಪ ಕಂದಮ್ಮಗಳನ್ನು ಸಾಯಿಸಿದ್ದಾರೆಂದು ಕಣ್ಣೀರಿಡುವುದು ಕಂಡು ಬಂತು.