ಗಾಣಿಗ ಸಮುದಾಯ ಅಭಿವೃದ್ಧಿಯಾಗಲಿ :ಜಗದ್ಗುರು ಕಲ್ಲಿನಾಥ ಶ್ರೀಗಳು

ಶಹಾಪುರ:ಫೆ.24: ಗಾಣಿಗ ಸಮಾಜ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ಗಾಣಿಗ ನಿಗಮ ಸ್ಥಾಪಿಸಿರುವುದಕ್ಕೆ ಕೋಲಾರದ ದಿಗಂಬರೇಶ್ವರಮಠದ ಕಲ್ಲಿನಾಥ ದೇವರು ಹರ್ಷ ವ್ಯಕ್ತಪಡಿಸಿದರು.
ಪಟ್ಟಣದಲ್ಲಿನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಜಗತ್ತಿಗೆ ಎಣ್ಣೆಯನ್ನು ಕೊಟ್ಟು ಬೆಳಕು ಕೊಟ್ಟಿರುವ ಗಾಣಿಗ ಕಲ್ಲಿನಾಥ ಸ್ವಾಮೀಜಿ ಸಮಾಜದವರು ಹಿಂದಿನಿಂದಲೂ ಕೂಲಿ ಹಾಗೂ ಕೃಷಿ ಕಾರ್ಮಿಕರಾಗಿ ಜೀವಿಸುತ್ತಿದ್ದಾರೆ. ಇದನ್ನು ಮನಗಂಡ ರಾಜ್ಯ ಸರ್ಕಾರ ಗಾಣಿಗ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪನೆಗೆ ಘೋಷಿಸಿರುವುದು ಬಹಳ ಸಂತಸ ತಂದಿದೆ ಎಂದರು. ರಾಜ್ಯದಲ್ಲಿ ಗಾಣಿಗ ಸಮಾಜ 85 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಬೇರೆ ಸಮುದಾಯದವರ ಹಾಗೆ ರಾಜ್ಯದ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕುವ ಮೂಲಕ ಮೀಸಲಾತಿ ಪಡೆದುಕೊಂಡಿಲ್ಲ. ಈ ಸಮಾಜ ಶೋಷಣೆಗೆ ಒಳಗಾಗಿರುವಂಥದ್ದು. ಈ ಸಮಾಜವನ್ನು ನಿರ್ಗತಿಕ ಸಮಾಜವೆಂದು ಗುರುತಿಸಿ ಬಹಳ ವರ್ಷಗಳ ಹಿಂದೆಯೇ 2ಎ ಮೀಸಲಾತಿ ನೀಡಲಾಗಿದೆ ಎಂದರು. ಈ ಸಮಾಜ ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಲೆಂದು ಸರ್ಕಾರ ಅಭಿವೃದ್ಧಿ ನಿಗಮ ಸ್ಥಾಪಿಸುವುದರ ಜೊತೆಗೆ 100 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ರಾಜ್ಯದಲ್ಲಿರುವ ಎಲ್ಲ ಗಾಣಿಗ ಸಮಾಜದ ಪರವಾಗಿ ಮುಖ್ಯಮಂತ್ರಿ, ಮಂತ್ರಿಮಂಡಲದ ಎಲ್ಲ ಸಚಿವರು ಹಾಗೂ ಶಾಸಕರಿಗೆ ಧನ್ಯವಾದ ಎಂದರು. ನಂತರ ಗಾಣಿಗ ಸಮಾಜದ ವತಿಯಿಂದ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.