ಗಾಣಿಗರ ಸಮುದಾಯ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ: ಜಯಪ್ರಕಾಶ್

ಚಾಮರಾಜನಗರ, ಜೂ. 16:- ತಾಲೂಕಿನ ವ್ಯಾಪ್ತಿಯಲ್ಲಿರುವ ಗಾಣಿಗರು ಸಂಘಟನೆಗೊಳ್ಳುವ ಜೊತೆಗೆ ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ, ಸಮಾಜದ ಮುಖ್ಯವಾಹಿನಿ ತರಬೇಕು ಎಂದು ಬೆಂಗಳೂರಿನ ಡಾ. ಜಯಪ್ರಕಾಶ್ ತಿಳಿಸಿದರು.
ತಾಲೂಕಿನ ಕೂಡ್ಲ್ಲೂರಿನಲ್ಲಿ ನೂತನ ತಾಲೂಕು ಶ್ರೀ ಜ್ಯೋತಿಪಣ ಗಾಣಿಗರ ಸಂಘವನ್ನು ಉದ್ಗಾಟಿಸಿ ಅವರು ಮಾತನಾಡಿದರು. ರಾಜ್ಯಾದ್ಯಂತ ಗಾಣಿಗರ ಸಮುದಾಯ ಅಲ್ಲಲ್ಲಿ ವೃತ್ತಿ ಕಾರಣದಿಂದ ಚದುರಿ ಹೋಗಿದ್ದಾರೆ. ಹೀಗಾಗಿ ಈ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯದೇ ಬಹಳ ಸಂಕಷ್ಟದಲ್ಲಿದೆ. ಸಂಘಟನೆ ಇಲ್ಲದೇ ಯಾವುದೇ ರೀತಿಯ ಅಭಿವೃದ್ದಿಯಾಗಲು ಸಾಧ್ಯವಿಲ್ಲ. ಹೀಗಾಗಿ ಗಾಣಿಗ ಸಮುದಾಯ ಮೊದಲು ಸಂಘಟನೆ ಕೊಂಡು ನಂತರ ತಮ್ಮ ಹಕ್ಕುಗಳಿಗೆ ಹೋರಾಟ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಸಹಕಾರ ಸಂಘಕ್ಕೆ ಇರುತ್ತದೆ ಎಂದರು.
ಮೈಸೂರು ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ಎನ್.ಸಿ. ಉಮೇಶ್ ಸಂಘದ ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿ, ಚಾಮರಾಜನಗರ ತಾಲೂಕಿನಲ್ಲಿ ಗಾಣಿಗರ ಸಂಘ ರಚನೆ ಮಾಡಿರುವುದು ಸಂತಸವಾಗಿದೆ. ಸಂಘಟನೆಯ ಪ್ರಮುಖರು ತಾಲೂಕಿನಲ್ಲಿ ಗಾಣಿಗರನ್ನು ಸಂಘಟನೆ ಮಾಡುವ ಜೊತೆಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಸಮುದಾಯದವರಿಗೆ ತೊಂದರೆಯಾದ ಸಂದರ್ಭದಲ್ಲಿ ಸಂಘಟನೆಯಲ್ಲಿರುವವರು ಮುಂದೆ ನಿಂತು ನ್ಯಾಯ ದೊರಕಿಸಿಕೊಡಬೇಕು. ಆ ಕುಟುಂಬಕ್ಕೆ ನ್ಯಾಯ ಕಲ್ಪಿಸಲು ತಮ್ಮ ಹೋರಾಟ ನಿರಂತರವಾಗಿಬೇಕು. ಸಂಘಟನೆಯೊಂದಿಗೆ ಜಿಲ್ಲಾಧ್ಯಂತ ಸಂಘಟನೆ ಮಾಡಿ, ಜಿಲ್ಲಾ ಸಂಘವನ್ನು ರಚನೆ ಮಾಡುವ ದಿಕ್ಕಿನಲ್ಲಿ ತಾವೆಲ್ಲರು ಮುನ್ನಡೆಯಬೇಕು ಎಂದು ತಿಳಿಸಿದರು.
ತಾಲೂಕು ಸಂಘದ ನೂತನ ಅಧ್ಯಕ್ಷ ಕೆ.ಸಿ. ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಾಮರಾಜನಗರ ತಾಲೂಕು ಶ್ರೀ ಜ್ಯೋತಿಪಣ ಗಾಣಿಗರ ಸಂಘವನ್ನು ರಚನೆ ಮಾಡಿ, ಎಲ್ಲಾ ಪದಾಧಿಕಾರಿಗಳನ್ನು ನೇಮಕ ಮಾಡಿ, ಪ್ರಗತಿಗೆ ಶ್ರಮಿಸಲಾಗುತ್ತಿದೆ. ಸಂಘದ ವತಿಯಿಂದ ಬಡ ಮಕ್ಕಳಿಗೆ ಶಿಕ್ಷಣ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಸೇರಿದಂತೆ ಗಾಣಿಗರ ಸಮುದಾಯದಲ್ಲಿರುವ ಎಲ್ಲರನ್ನು ಮುಂಚೂಣಿಗೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದರು.
ಹಿಂದುಳಿದ ವರ್ಗಗಳ 2ಎಗೆ ಸೇರಿರುವ ಗಾಣಿಗರ ಸಮುದಾಯಕ್ಕೆ ಹೆಚ್ಚಿನ ಸವಲತ್ತುಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಗಾಣಿಗರ ನಿಗಮ ಮಂಡಳಿಯನ್ನು ರಚನೆ ಮಾಡಿದ್ದು, ಇದಕ್ಕೆ ಸೂಕ್ತ ಅನುದಾನವನ್ನು ನೀಡಿ, ಸರ್ಕಾರ ಸಮುದಾಯವನ್ನು ಬಲವರ್ಧನೆ ಮಾಡಲು ಮುಂದಾಗಬೇಕು ಎಂದು ಜಗದೀಶ್ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗಾಣಿಗ ಸಂಘದ ಗೌರವ ಅಧ್ಯಕ್ಷರಾದ ರಾಜಣ್ಣ, ನಾಗರಾಜಶೆಟ್ಟಿ, ಕಾರ್ಯಾಧ್ಯಕ್ಷ ಸೋಮವಾರಪೇಟೆ ರಂಗಸ್ವಾಮಿ ಆರ್. ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟು ಲಕ್ಷ್ಮಣ, ಖಜಾಂಚಿ ಕೂಡ್ಲೂರು ಕೃಷ್ಣ, ಉಪಾಧ್ಯಕ್ಷರಾದ ಸಿ.ರವಿ, ನಂಜುಂಡಸ್ವಾಮಿ, ಪ್ರಸಾದ್ ಎಚ್.ಎನ್. ಗೌರವ ಸಲಹೆಗಾರ ಚಿಕ್ಕಸ್ವಾಮಿ, ಕೆ.ಎಸ್. ಸಂಘಟನಾ ಕಾರ್ಯಾದರ್ಶಿ ಮಾದಪ್ಪ ಕಸ್ತೂರು, ಸಹ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕ ಮಧುಸೂಧನ್, ಲೆಕ್ಕಪರಿಶೋಧಕ ಕಪ್ಪಣ್ಣಶೆಟ್ಟಿ ಮರಹಳ್ಳಿ ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ವಿವಿಧ ತಾಲೂಕುಗಳ ಗಾಣಿಗರ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು, ಸಂಘದ ನಿರ್ದೇಶಕರು, ತಾಲೂಕಿನ ಎಲ್ಲಾ ಯಜಮಾನರು, ಮುಖಂಡರು ಭಾಗವಹಿಸಿದ್ದರು.