ಗಾಣಿಗರ ಅಭಿವೃದ್ದಿ ನಿಗಮ ಸ್ಥಾಪಿಸಿ, ಅನುದಾನ ನೀಡಲು ಅನಂದ್ ಆಗ್ರಹ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಜು.24:- ಹಿಂದುಳಿದ ವರ್ಗದ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನು ಅತ್ಯಂತ ಹಿಂದುಳಿದ ಗಾಣಿಗ ಸಮುದಾಯ ಅಭಿವೃದ್ದಿಗಾಗಿ ಪ್ರತ್ಯೇಕ ನಿಗಮಕ್ಕೆ ಉತ್ತೇಜನ ನೀಡಿ, ಹೆಚ್ಚಿನ ಅನುದಾನನೀಡಬೇಕು ಎಂದು ಎಂದು ಸುವರ್ಣ ಕರ್ನಾಟಕ ಗಾಣಿಗರ ಸಂಘದ ರಾಜ್ಯಾಧ್ಯಕ್ಷ ಕೆ. ಅನಂದ್ ಮಂಡ್ಯ ಒತ್ತಾಯಿಸಿದರು.
ಚಾ.ನಗರಕ್ಕೆ ಸುವರ್ಣ ಕರ್ನಾಟಕ ಗಾಣಿಗರ ಸಂಘ ರಾಜ್ಯ ಘಟಕದ ಪದಾಧಿಕಾರಿಗಳು ಭಾನುವಾರ ಭೇಟಿ ನೀಡಿ, ತಾಲೂಕು ಗಾಣಿಗರ ಸಂಘ ಪದಾಧಿಕಾರಿಗಳೊಂದಿಗೆ ಸಂಘಟನೆ ಕುರಿತು ಸಭೆ ನಡೆಸಿ ಮಾತನಾಡಿ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅಲ್ಲಲ್ಲಿ ಗಾಣಿಗ ಸಮುದಾಯದವರು ವಾಸಿಸುತ್ತಿದ್ದು, ಎಣ್ಣೆ ತೆಗೆಯುವ ಪ್ರವೃತ್ತಿ ಯೊಂದಿಗೆ ಗಾಣಿಗ ಸಮುದಾಯದವರು ಜೀವನ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲಿ ಗುಡಿ ಕೈಗಾರಿಕೆಗಳು ನಾಶಿಸುತ್ತಿದ್ದು, ಇದನ್ನು ಉತ್ತೇಜನ ಮಾಡುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಅವರು ಕೂಡಲೇ ನಿಗಮ ಸ್ಥಾಪನೆ ಮಾಡಿ, ವಿಶೇಷ ಪ್ಯಾಕೇಜ್ ನೀಡುವ ಮೂಲಕ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು ಎಂದು ಮನವಿ ಮಾಡಿದರು.
ನಾವೆಲ್ಲರು ಗಾಣಿಗ ಸಮುದಾಯದವರು ಸಂಘಟನೆಯ ಮೂಲಕ ನಮ್ಮ ಶಕ್ತಿಯನ್ನು ಪ್ರದರ್ಶನ ಮಾಢಬೇಕಾಗಿದೆ. ಆಯಾ ತಾಲೂಕು ಹಾಗು ಜಿಲ್ಲಾ ಮಟ್ಟಗಳಲ್ಲಿ ಗಾಣಿಗರ ಸಂಘವನ್ನು ಬಲಿಷ್ಟ ಗೊಳಿಸಿಕೊಂಡು ನಮ್ಮ ಇರುವಿಕೆಯನ್ನು ಆಯಾ ರಾಜಕೀಯ ಮುಖಂಡರಿಗೆ ತೋರ್ಪಡಿಸಬೇಕಾಗಿದೆ. ಇತರೇ ಸಮುದಾಯಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಗಾಣಿಗ ಸಮುದಾಯದ ಮುಖಂಡರು ರಾಜಕೀಯ, ಶೈಕ್ಷಣಿಕ ಹಾಗೂ ಅರ್ಥಿಕ ಅಭಿವೃದ್ದಿಯನ್ನು ಸಾಧಿಸಬೇಕಾಗಿದೆ. ಈಗಾಗಲೇ ಗಾಣಿಗ ಸಮುದಾಯವನ್ನು 2ಎ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದು, ಗಾಣಿಕರೊಂದಿಗೆ ಇತರೇ ಉಪ ಜಾತಿಗಳು ಸೇರಿಕೊಂಡು ನಮ್ಮ ಮೀಸಲಾತಿಯನ್ನು ಪಡೆದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಇದರ ಬಗ್ಗೆ ಜನಾಂಗದ ಮುಖಂಡರು ಗಂಭೀರವಾಗಿ ಚಿಂತನೆ ಮಾಡಬೇಕು. ನಮ್ಮಲ್ಲಿರುವ ಒಡಕಿನ ಲಾಭವನ್ನು ಇತರರರು ಪಡೆದುಕೊಳ್ಳಲು ಬಿಡಬಾರದು. ಎಲ್ಲರು ಒಂದೇ ವೇದಿಕೆಯಲ್ಲಿ ಸಂಘಟನೆಯಾಗಬೇಕು ಎಂದು ಕೆ.ಆನಂದ್ ಮನವಿ ಮಾಡಿದರು.
ಸಂಘದ ಗೌರವಾಧ್ಯಕ್ಷ ಟಿ.ಎಂ. ಆಶೋಕ್‍ಕುಮಾರ್ ಮಾತನಾಡಿ, ರಾಜ್ಯಾದ್ಯಂತ ಗಾಣಿಗರ ಸಮುದಾಯ ಅಲ್ಲಲ್ಲಿ ವೃತ್ತಿ ಕಾರಣದಿಂದ ಚದುರಿ ಹೋಗಿದ್ದಾರೆ. ಹೀಗಾಗಿ ಈ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯದೇ ಬಹಳ ಸಂಕಷ್ಟದಲ್ಲಿದೆ. ಸಂಘಟನೆ ಇಲ್ಲದೇ ಯಾವುದೇ ರೀತಿಯ ಅಭಿವೃದ್ದಿಯಾಗಲು ಸಾಧ್ಯವಿಲ್ಲ. ಗಾಣಿಗ ಸಮುದಾಯ ಮೊದಲು ಸಂಘಟನೆ ಕೊಂಡು ನಂತರ ತಮ್ಮ ಹಕ್ಕುಗಳಿಗೆ ಹೋರಾಟ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮೆಲ್ಲರ ಸಹಕಾರ ಕೋರಲು ಚಾ.ನಗರಕ್ಕೆ ರಾಜ್ಯ ತಂಡ ಭೇಟಿ ಮಾಡಿದೆ ಎಂದರು.
ರಾಜ್ಯ ಸಂಘದ ಮಹಿಳಾ ಅಧ್ಯಕ್ಷೆ ಪ್ರಮೀಳಾ ಮೂರ್ತಿ ಮಾತನಾಡಿ, ಚಾಮರಾಜನಗರ ತಾಲೂಕಿನಲ್ಲಿ ಗಾಣಿಗರ ಸಂಘ ರಚನೆ ಮಾಡಿರುವುದು ಸಂತಸವಾಗಿದೆ. ಸಂಘಟನೆಯ ಪ್ರಮುಖರು ತಾಲೂಕಿನಲ್ಲಿ ಗಾಣಿಗರನ್ನು ಸಂಘಟನೆ ಮಾಡುವ ಜೊತೆಗೆ ರಾಜ್ಯ ಸಂಘದ ಜೊತೆಗೆ ಸೌಖ್ಯವನ್ನು ಬೆಳೆಸಿಕೊಂಡು ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ಮುಂದಾಗಬೇಕು. ನಮ್ಮ ಮಕ್ಕಳಿಗೆ ಮೊದಲು ಶಿಕ್ಷಣ ಕೊಡಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರೋಣ. ಸಂಘಟನೆಯಿಂದ ಮಾತ್ರ ಹಕ್ಕು ಪಡೆದುಕೊಳ್ಳು ಸಾಧ್ಯವಿದೆ ಎಂದರು.
ತಾಲೂಕು ಸಂಘದ ಅಧ್ಯಕ್ಷ ಕೆ.ಸಿ. ಜಗದೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ತಾಲೂಕಿಗೆ ರಾಜ್ಯ ಸಂಘದ ಅಧ್ಯಕ್ಷರು ಹಾಗೂ ಪ್ರಮುಖರು ಭೇಟಿ ನೀಡಿ, ಸಮಾಜದ ಹಿರಿಯರನ್ನು ಭೇಟಿ ಮಾಡಿ, ಸಂಘಟನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈಗ ನಮ್ಮದೇ ಹಿಂದುಳಿದ ವರ್ಗದ ನಾಯಕರಾದ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದು, ಅವರೊಂದಿಗೆ ಉತ್ತಮ ಭಾಂದವ್ಯ ವನ್ನು ಹೊಂದಿ, ಗಾಣಿಗರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ಆಯಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಗಾಣಿಗರ ಸಮುದಾಯ ಭವನಗಳು ನಿರ್ಮಾಣ, ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಸಮುದಾಯಕ್ಕೆ ಹೆಚ್ಚಿನ ಪಾಲು ದೊರೆಯುವಂತೆ ಮಾಡುವುದು, ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅದ್ಯತೆಯನ್ನು ನೀಡಬೇಕು. ನಿಮ್ಮ ಸಂಘಟನೆಯಲ್ಲಿ ನಾವೆಲ್ಲರು ಸಕ್ರಿಯವಾಗಿ ಭಾಗವಹಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಲೈವ್ ವಿಡಿಯೋ ಮೂಲಕ ಸಂಘದ ರಾಜ್ಯಾಧ್ಯಕ್ಷ ಕೆ. ಆನಂದ್ ಮತ್ತು ಪದಾಧಿಕಾರಿಗಳು ಗಾಣಿಗ ಸಮುದಾಯದ ಸಂಕಷ್ಟನ್ನು ಸಿಎಂ ಅವರಿಗೆ ವಿವರವಾಗಿ ದಾಖಲು ಮಾಡಿದರು.
ಸುವರ್ಣ ಕರ್ನಾಟಕ ಗಾಣಿಗರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ಅನಂತ್, ಸಂಘಟನಾ ಕಾರ್ಯಧರ್ಶಿ ವಿನಯಕÀುಮಾರ್, ಮಹಿಳಾ ಘಟಕ ಕಾರ್ಯದರ್ಶಿ ಅರುಣರವಿಕುಮಾರ್, ಗೌರವ ಅಧ್ಯಕ್ಷೆ ಶಂಕುತಲಾ ತೇಲಿ ಬೆಳಗಾವಿ, ಮಹದೇವಿ, ಖಜಾಂಚಿ ವೆಂಕಟೇಶ್, ತಾಲೂಕು Àಗಾಣಿಗರ ಸಂಘದ ಗೌರವ ಅಧ್ಯಕ್ಷರಾದ ರಾಜಣ್ಣ, ನಾಗರಾಜಶೆಟ್ಟಿ, ಕಾರ್ಯಾಧ್ಯಕ್ಷ ಸೋಮವಾರಪೇಟೆ ರಂಗಸ್ವಾಮಿ ಆರ್. ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟು ಲಕ್ಷ್ಮಣ, ಖಜಾಂಚಿ ಕೂಡ್ಲೂರು ಕೃಷ್ಣ, ಉಪಾಧ್ಯಕ್ಷರಾದ ಸಿ. ರವಿ, ನಂಜುಂಡಸ್ವಾಮಿ, ಪ್ರಸಾದ್ ಎಚ್.ಎನ್. ಗೌರವ ಸಲಹೆಗಾರ ಚಿಕ್ಕಸ್ವಾಮಿ, ಕಪ್ಪಣ್ಣ, ಬೆಳ್ಳಶೆಟ್ಟಿ, ಮಧು, ಸಂಘಟನಾ ಕಾರ್ಯಾದರ್ಶಿ ಮಾದಪ್ಪ ಕಸ್ತೂರು, ಸಹ ಕಾರ್ಯದರ್ಶಿ ರಂಗಸ್ವಾಮಿ, ನಿರ್ದೇಶಕ ಮಧುಸೂಧನ್, ಲೆಕ್ಕಪರಿಶೋಧಕ ಕಪ್ಪಣ್ಣಶೆಟ್ಟಿ ಮರಹಳ್ಳಿ ಹಾಗು ಸಮಾಜದ ಮುಖಂಡರು ಇದ್ದರು.