ಗಾಣಗಾಪುರದ ದತ್ತ ಮಹಾರಾಜರ ಉತ್ಸವದಲ್ಲಿ ಅಂತರ್ರಾಜ್ಯ ಕಳ್ಳನ ಸೆರೆ

ಕಲಬುರಗಿ:ಜ.12: ಅಂತರ್ರಾಜ್ಯ ಕಳ್ಳನೊಬ್ಬನಿಗೆ ಪೋಲಿಸರು ಬಂಧಿಸಿದ ಘಟನೆ ಅಫಜಲಪುರ ತಾಲ್ಲೂಕಿನ ದೇವಲ್ ಗಾಣಗಾಪುರದಲ್ಲಿ ದತ್ತ ಮಹಾಜರ ಉತ್ಸವದಲ್ಲಿ ವರದಿಯಾಗಿದೆ.
ಬಂಧಿತನಿಗೆ ಮಹಾರಾಷ್ಟ್ರ ರಾಜ್ಯದ ನಲವಾಡ್ ನಾಕಾ ಬೀಡ್‍ನ ಶಾಸ್ತ್ರೀನಗರದ ನಿವಾಸಿ ನಾತಾ ಅಲಿಯಾಸ್ ನಾತುಲಾಲ್ ಗಾಯಕವಾಡ್ (46) ಎಂದು ಗುರುತಿಸಲಾಗಿದೆ.
ಬಂಧಿತನಿಂದ ಮೂರು ಪ್ರತ್ಯೇಕ ಕಳ್ಳತನ ಪ್ರಕರಣಗಳಲ್ಲಿ ಕಳ್ಳತನವಾದ 8.20 ಲಕ್ಷ ರೂ.ಗಳ ಮೌಲ್ಯದ 180 ಗ್ರಾಮ್ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಕಳೆದ ಡಿಸೆಂಬರ್ 18ರಂದು ದೇವಲ್ ಗಾಣಗಾಪುರದ ದತ್ತ ಮಹಾರಾಜರ ಉತ್ಸವದ ಸಂದರ್ಭದಲ್ಲಿ ಹೈದ್ರಾಬಾದ್‍ನ ವೆಂಕಟೇಶ್ ತಂದೆ ಸಂಗಯ್ಯ ಅವರಿಂದ 55000ರೂ.ಗಳ ಮೌಲ್ಯದ 15 ಗ್ರಾಮ್ ತೂಕದ ಚಿನ್ನದ ಸರ, 55000ರೂ.ಗಳ ಮೌಲ್ಯದ ಇನ್ನೊಂದು 15 ಗ್ರಾಮ್ ತೂಕದ ಚಿನ್ನದ ಚೈನ್, ಹೈದ್ರಾಬಾದ್‍ನ ಅರ್ಚನಾ ಅವರಿಗೆ ಸೇರಿದ 1.10 ಲಕ್ಷ ರೂ.ಗಳ ಮೌಲ್ಯದ 30 ಗ್ರಾಮ್ ತೂಕದ ಬಂಗಾರದ ಮಂಗಳಸೂತ್ರ, ಪುಣೆಯ ವಿಕಾಸ್ ತಂದೆ ರಾವ್‍ಸಾಹೇಬ್ ಹಗವಾನೆ ಅವರಿಗೆ ಸೇರಿದ ಮೂರು ಲಕ್ಷ ರೂ.ಗಳ ಮೌಲ್ಯದ 60 ಗ್ರಾಮ್ ತೂಕದ ಬಂಗಾರದ ಚೈನ್ ಕಳ್ಳತನದ ಕುರಿತು ದೇವಲ್ ಗಾಣಗಾಪೂರ್ ಪೋಲಿಸ್ ಠಾಣೆಯಲ್ಲಿ ಪ್ರತ್ಯೇಕ ಮೂರು ಕಳ್ಳತನ ಪ್ರಕರಣಗಳು ದಾಖಲಾಗಿದ್ದವು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇಶಾ ಪಂತ್, ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಪ್ರಸನ್ನಕುಮಾರ್ ದೇಸಾಯಿ, ಡಿವೈಎಸ್‍ಪಿ ಮಲ್ಲಿಕಾರ್ಜುನ್ ಸಾಲಿ ಅವರ ಮಾರ್ಗದರ್ಶನದಲ್ಲಿ ಸಿಪಿಐ ಜಗದೇವಪ್ಪ ಪಾಳಾ ಅವರ ನೇತೃತ್ವದಲ್ಲಿ ಪಿಎಸ್‍ಐ ರಾಜಶೇಖರ್ ರಾಠೋಡ್, ಸಿಬ್ಬಂದಿಗಳಾದ ಮಲ್ಲಿಕಾರ್ಜುನ್, ಪ್ರದೀಪ್, ಮೌನೇಶ್, ಸಂತೋಷ್ ಅವರು ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಯಶಸ್ವಿ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.