ಗಾಣಗಾಪುರದಲ್ಲಿ ಹೆಚ್ಚಿದ ಭಕ್ತರ ಸಂಖ್ಯೆ:ಕೋಟಿ ಸಮೀಪಿಸಿದ ದತ್ತನ ಹುಂಡಿ ಕಾಣಿಕೆ

ಅಫಜಲಪುರ:ಆ.23: ಶಕ್ತಿ ಯೋಜನೆ ಜಾರಿಯಾದ ನಂತರ ರಾಜ್ಯದ ಪುಣ್ಯ ಕ್ಷೇತ್ರಗಳ ದೇವಾಲಗಳಿಗೆ ಆಗಮಿಸುವ ಪ್ರವಾಸಿಗರು ಹಾಗೂ ಭಕ್ತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಇದರಿಂದಾಗಿ ದೇವಾಲಯಗಳ ಹುಂಡಿಗಳು ತುಂಬಿ ತುಳುಕುತ್ತಿದ್ದು, ಸರ್ಕಾರದ ಬೊಕ್ಕಸ ಹಾಗೂ ದೇವಸ್ಥಾನಗಳ ಆದಾಯವು ವೃದ್ಧಿಯಾಗಿದೆ.

ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ
ದಕ್ಷಿಣ ಭಾರತದ ಧಾರ್ಮಿಕ ಕ್ಷೇತ್ರವಾದ ಸುಕ್ಷೇತ್ರ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದರ್ಶನ ಪಡೆಯಲು ರಾಜ್ಯದ ಉದ್ದಗಲದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿದ್ದಾರೆ.

ಈ ಹಿಂದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಕೇರಳ ಸೇರಿದಂತೆ ದಕ್ಷಿಣ ಭಾರತದ ಅಸಂಖ್ಯಾತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುತ್ತಿದ್ದರು.

ಆದರೆ ಶಕ್ತಿ ಯೋಜನೆ ಜಾರಿಯಾದ ನಂತರ ರಾಜ್ಯದ ಜನರು ಕೂಡ ಹೆಚ್ಚಿನ ಪ್ರಮಾಣದಲ್ಲಿ ದೌಡಾಯಿಸುತ್ತಿದ್ದಾರೆ. ಇದರಿಂದಾಗಿ ದೇವಸ್ಥಾನದ ಹುಂಡಿಯಲ್ಲಿನ ಕಾಣಿಕೆಯ ಹಣವು ಸಹ ದುಪ್ಪಟ್ಟಾಗಿದೆ. ಕೋವಿಡ್ ಮುನ್ನ ಒಂದು ಕೋಟಿಗೂ ಅಧಿಕ ಕಾಣಿಕೆ ಸಂಗ್ರವಾಗಿದ್ದು ದಾಖಲೆಯಾಗಿತ್ತು. ಆದರೆ ಅದಾದ ಬಳಿಕ ಇದೇ ಮೊದಲ ಬಾರಿಗೆ ಹೆಚ್ಚಿನ ಪ್ರಮಾಣದಲ್ಲಿ ಭಕ್ತರ ಕಾಣಿಕೆ ಸಂಗ್ರಹವಾಗಿದೆ.

ಪ್ರತಿ 4 ತಿಂಗಳಿಗೊಮ್ಮೆ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯುತ್ತಿದ್ದು ಕಳೆದ ಮಾರ್ಚ್ 30ರಂದು 69,36,335 ರೂ. ಸಂಗ್ರಹವಾಗಿತ್ತು. ಬಳಿಕ ಡಿಸೆಂಬರ್ 17ರಂದು 85,99,941 ರೂ. ಸಂಗ್ರಹವಾಗಿತ್ತು. ನಂತರ ಇತ್ತೀಚೆಗೆ ಆಗಸ್ಟ್ 19ರಂದು 97,10,152 ರೂ. ಸೇರಿದಂತೆ 26 ಗ್ರಾಂ ಚಿನ್ನ, 496 ಗ್ರಾಂ ಬೆಳ್ಳಿ ಕಾಣಿಕೆ ಸಂಗ್ರವಾಗಿದೆ.


ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿರುವುದರಿಂದ ಭಕ್ತರ ವಿಶೇಷ ದರ್ಶನಕ್ಕೆ 101 ರೂ. ದೇಣಿಕೆ ಪಡೆಯಲಾಗುತ್ತದೆ. ಅದರಲ್ಲಿ 40%ರಷ್ಟು ಆದಾಯ ಅರ್ಚಕರಿಗೆ ಹಾಗೂ ಉಳಿದ 60%ರಷ್ಟು ಆದಾಯ ಮುಜರಾಯಿ ಇಲಾಖೆಗೆ ಸಲ್ಲುತ್ತದೆ.
ಹಾಗೂ ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟು ಮಾಡುವ ಗೂಡಂಗಡಿಗಳ ಮಾಲೀಕರ ಆದಾಯ ವೃದ್ಧಿಯಾಗಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.


ಉಚಿತ ಬಸ್ ಜಾರಿಯಾದ ನಂತರ ರಾಜ್ಯದ ಉದ್ದಗಲದಿಂದ ಭಕ್ತರ ಸಂಖ್ಯೆಯಲ್ಲಿ ವಿಶೇಷವಾಗಿ ಮಹಿಳಾ ಭಕ್ತರು ತಂಡೋಪ ತಂಡವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

  • ನಾಮದೇವ ರಾಠೋಡ. ಕಾರ್ಯನಿರ್ವಾಹಕ ಅಧಿಕಾರಿ, ದೇವಲ ಗಾಣಗಾಪುರ.