ಗಾಝಾ ಮೇಲೆ ಇಸ್ರೇಲ್ ದಾಳಿ: ಉಗ್ರ ಜಬಾರಿ ಸೇರಿ ೧೫, ಸಾವು

ಗಾಝಾ ಸಿಟಿ, ಆ.೬- ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್ ಸಂಘಟನೆಯ ಕಮಾಂಡರ್ ತೈಸೀರ್ ಜಬಾರಿ ಸೇರಿದಂತೆ ೧೫ ಜನ ಮೃತಪಟ್ಟು ೫೦ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ. ಸದ್ಯ ಇಸ್ರೇಲ್ ದಾಳಿಗೆ ಪ್ರತಿಯಾಗಿ ಇಸ್ಲಾಮಿಕ್ ಜಿಹಾದ್ ಸಂಘಟನೆಯು ಇಸ್ರೇಲ್ ಮೇಲೆ ೧೦೦ಕ್ಕೂ ಹೆಚ್ಚು ರಾಕೆಟ್ ದಾಳಿ ನಡೆಸಿದೆ.
ವಾರದ ಹಿಂದೆ ವೆಸ್ಟ್‌ಬ್ಯಾಂಕ್‌ನಲ್ಲಿ ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್ (ಪಿಐಜೆ) ಸಂಘಟನೆಯ ಪ್ರಮುಖ ಎಂದೇ ಹೇಳಲಾಗಿರುವ ಬಸ್ಸಮ್ ಸಾದಿ ಎಂಬಾತನನ್ನು ಇಸ್ರೇಲ್ ಬಂಧಿಸಿತ್ತು. ಇದರಿಂದ ಇಸ್ರೇಲ್ ಮೇಲೆ ಮರುದಾಳಿ ನಡೆಸುವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್), ಪ್ಯಾಲೆಸ್ತೀನ್ ಇಸ್ಲಾಮಿಕ್ ಜಿಹಾದ್ ಸಂಘಟನೆಯ ಮೇಲೆ ಪೂರ್ವನಿಯೋಜಿತ ದಾಳಿ ನಡೆಸಲಾಗಿದ್ದು, ಇಸ್ರೇಲ್‌ನಲ್ಲಿ ಇತ್ತೀಚೆಗೆ ನಡೆದ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದ ಪ್ಯಾಲೆಸ್ತೀನ್ ಉಗ್ರ ಗುಂಪಿನ ಅಗ್ರ ಕಮಾಂಡರ್ ನನ್ನು ಹತ್ಯೆ ಮಾಡಲಾಗಿದೆ. ಗಾಝಾ ಸಿಟಿಯ ಅಪಾಯಕಾರಿ ಪ್ಯಾಲೆಸ್ತೀನ್ ಟವರ್ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ. ಇನ್ನು ದಾಳಿಯಲ್ಲಿ ತೈಸೀರ್ ಜಬಾರಿ ಸೇರಿದಂತೆ ನಾಲ್ವರು ಉಗ್ರರು ಹತರಾಗಿದ್ದು, ಒಟ್ಟಾರೆಯಾಗಿ ಮೃತಪಟ್ಟವರಲ್ಲಿ ಐದರ ಹರೆಯದ ಮಗು ಕೂಡ ಸೇರಿದೆ ಎನ್ನಲಾಗಿದೆ ಎಂದು ಸ್ಥಳೀಯ ಆರೋಗ್ಯ ಕಾರ್ಯಕರ್ತರು ತಿಳಿಸಿದ್ದಾರೆ. ಆದರೆ ಇಸ್ರೇಲ್ ಮಿಲಿಟರಿ ಅಧಿಕಾರಿಗಳು ಘಟನೆಯಲ್ಲಿ ೧೫ ಉಗ್ರವಾದಿಗಳು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಘಟನೆ ಹಿನ್ನೆಲೆಯಲ್ಲಿ ಇರಾನ್‌ನ ತೆಹ್ರಾನ್ ಭೇಟಿಯಲ್ಲಿರುವ ಪಿಐಜೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಝಿಯಾದ್ ಅಲ್ ನಖಾಲಾ ಪ್ರತಿಕ್ರಿಯೆ ನೀಡಿದ್ದು, ಇಸ್ರೇಲ್ ದಾಳಿಗೆ ನಾವು ಪ್ರತ್ಯುತ್ತರ ನೀಡುತ್ತೇವೆ. ಗೆಲುವು ನಮ್ಮದೇ ಆಗಿರಲಿದೆ. ಈ ಯುದ್ದಕ್ಕೆ ಅಂತ್ಯವಿಲ್ಲ, ಟೆಲ್ ಅವಿವ್ (ಇಸ್ರೇಲ್ ರಾಜಧಾನಿ) ಪ್ರತಿರೋಧದ ರಾಕೆಟ್ ಅಡಿಯಲ್ಲಿ ಇರಲಿದೆ ಎಂದು ತಿಳಿಸಿದ್ದಾರೆ. ಇನ್ನು ಇಸ್ರೇಲ್ ದಾಳಿಗೆ ಪ್ರತಿಯಾಗಿ ಸಂಘಟನೆ ೧೦೦ಕ್ಕೂ ಹೆಚ್ಚು ರಾಕೆಟ್‌ಗಳ ಮೂಲಕ ದಾಳಿ ನಡೆಸಿದೆ. ಆದರೆ ಇಸ್ರೇಲ್‌ನಲ್ಲಿ ಸಂಭವಿಸಿದ ಸಾವು ನೋವುಗಳ ಬಗ್ಗೆ ವಿವರ ತಿಳಿದು ಬಂದಿಲ್ಲ. ನಗರದ ಬಾಂಬ್ ಶೆಲ್ಟರ್ ಗಳನ್ನು ತೆರೆಯಲಾಗಿದೆ ಎಂದು ಟೆಲ್ ಅವೀವ್‌ನ ಅಧಿಕಾರಿಗಳು ಹೇಳಿದ್ದಾರೆ.