ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನದ ಸೊಬಗು 

ದಾವಣಗೆರೆ.ನ.೧೩: ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಕಳೆಗುಂದಿದ್ದ ಫಲಪುಷ್ಪ ಪ್ರದರ್ಶನಕ್ಕೆ ಈ ಬಾರಿ ರಂಗು ಬಂದಿದೆ. ನಾಲ್ಕು ದಿನಗಳ ಕಾಲ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಸದ ಡಾ. ಜಿ. ಎಂ. ಸಿದ್ದೇಶ್ವರ್ ಗುರುವಾರ ಅಧಿಕೃತವಾಗಿ ಈ ಪ್ರದರ್ಶನಕ್ಕೆ ಚಾಲನೆ ನೀಡಿದ್ದು, ಜನರು ಸಹ ಸೊಬಗು ವೀಕ್ಷಿಸಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.ಗಾಜಿನ ಮನೆಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನವು ಪ್ರತಿವರ್ಷವೂ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತಿತ್ತು. ಕೊರೊನಾ ಮೊದಲನೇ ಹಾಗೂ ಎರಡನೇ ಅಲೆ ವೇಳೆ ಅಷ್ಟೇನೂ ಫಲಪುಷ್ಪ ಪ್ರದರ್ಶನ ಕಳೆಗಟ್ಟಿರಲಿಲ್ಲ. ಈ ವರ್ಷ ವೈಭವೋಪೇತವಾಗಿ ಮಾಡಿದ್ದು, ಪುನೀತ್ ರಾಜಕುಮಾರ್, ರಾಜಕುಮಾರ್, ಹರಿಹರದ ಹರಿಹರೇಶ್ವರ ದೇವಸ್ಥಾನದ ಮಾದರಿ ಸೇರಿದಂತೆ ಎಲ್ಲಾ ಕಲಾಕೃತಿಗಳು ಗಮನ ಸೆಳೆಯುತ್ತಿವೆ. ಒಂದಕ್ಕಿಂತ ಮತ್ತೊಂದು ಸೂಪರ್ ಆಗಿದ್ದು, ನೋಡುಗರ ಕಣ್ಮನ ತಣಿಸುತ್ತಿವೆ. ಗ್ಲಾಸ್ ಹೌಸ್ ನ ಮತ್ತೊಂದು ಈ ಬಾರಿಯ ಆಕರ್ಷಣೆ ಎಂದರೆ ಕಾರಂಜಿ. ಜೊತೆಗೆ ಗಾಜಿನ ಮನೆಯು ಈಗ ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಹೊಸಲೋಕವೇ ಸೃಷ್ಟಿಯಾದಂತಿದೆ. ಬೆಳಕಿನ ನಡುವೆ ಪ್ರಜ್ವಲಿಸುವ ರೀತಿಯಲ್ಲಿ ಕಾಣುವ ಕಲಾಕೃತಿಗಳನ್ನು ನೋಡುವುದೇ ಒಂದು ರೀತಿಯ ಹಬ್ಬ ಎಂದೆನಿಸುತ್ತಿದೆ. ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಪುಷ್ಕರಣೆ, ವಸಂತ ಮಂಟಪ, ಹರಿಹರದ ಹರಿಹರೇಶ್ವರ ಮೂರ್ತಿ, ಸೆಲ್ಫಿ ಪ್ರಿಯರಿಗಾಗಿ ರೂಪಿಸಿರುವ ಐ ಲವ್ ದಾವಣಗೆರೆ ಹೂವಿನ ಕಲಾಕೃತಿ, ಪುನೀತ್ ರಾಜಕುಮಾರ್, ವರನಟ ಡಾ. ರಾಜಕುಮಾರ್ ಅವರ ಯೋಗ ಭಂಗಿ, ಬೇಡರ ಕಣ್ಣಪ್ಪ, ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಬೊಂಬೆ ರಾತ್ರಿಯ ವೇಳೆಯ ಬೆಳಕಿನಲ್ಲಿ ನೋಡುವುದೇ ಚೆಂದ. ಇನ್ನು ರೈತರು ಬೆಳೆದ ವಿವಿಧ ಹಣ್ಣುಗಳು, ಗುಲಾಬಿ ಸೇರಿದಂತೆ ಇತರೆ ರೀತಿಯಯ ಹೂವುಗಳು ಜನರನ್ನು ಆಕರ್ಷಿಸುತ್ತಿವೆ. ಅಲಂಕಾರಿಕಾ ಗಿಡಗಳು ಬೆಳಕಿನಲ್ಲಿ ಕಂಗೊಳಿಸುತ್ತಿವೆ. ವಿವಿಧ ನಮೂನೆಯ ಮೀನುಗಳ ಅಕ್ವೇರಿಯಂ ಮನ ಸೆಳೆಯುತ್ತಿವೆ.