ಗಾಜಾ : ಸಾವಿನ ಸಂಖ್ಯೆ ೨೦ ಸಾವಿರ

ಗಾಜಾ, ಡಿ.೨೧- ಅಕ್ಟೋಬರ್ ೭ರ ಬಳಿಕ ಗಾಜಾ ಮೇಲೆ ಆರಂಭವಾದ ಇಸ್ರೇಲ್ ದಾಳಿಯ ಬಳಿಕ ಇದೀಗ ಪ್ಯಾಲೆಸ್ತೇನ್‌ನಲ್ಲಿ ಮೃತಪಟ್ಟವರ ಸಂಖ್ಯೆ ಬರೋಬ್ಬರಿ ೨೦ ಸಾವಿರದ ಗಡಿ ದಾಟಿದೆ ಎನ್ನಲಾಗಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಸದ್ಯ ಮಾನವೀಯ ಪರಿಸ್ಥಿತಿ ಸಂಪೂರ್ಣವಾಗಿ ಕುಸಿದಿದ್ದು, ನಿರಾಶ್ರಿತ ನಾಗರಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೂ ಅಲ್ಲದೆ ಗಾಜಾದಲ್ಲಿ ಇಸ್ರೇಲ್ ಸೇನೆ ಸುಮಾರು ೨೯ ಸಾವಿರಕ್ಕೂ ಅಧಿಕ ಬಾಂಬ್ ದಾಳಿ ನಡೆಸಿದೆ ಎನ್ನಲಾಗಿದೆ.
ಏಳು ದಿನಗಳ ಕದನ ವಿರಾಮವನ್ನು ಹೊರತುಪಡಿಸಿ ಇಸ್ರೇಲ್-ಹಮಾಸ್ ನಡುವಿನ ಸಂಘರ್ಷ ಪ್ರಾರಂಭದಿಂದಲೂ ಪ್ರತೀ ದಿನ ಸರಾಸರಿ ೩೦೦ ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ ಸಂಘರ್ಷದ ಸಮಯದಲ್ಲಿ ಗಾಜಾದಲ್ಲಿ ಕೊಲ್ಲಲ್ಪಟ್ಟವರಲ್ಲಿ ಮಹಿಳೆಯರು ಮತ್ತು ಮಕ್ಕಳ ಪ್ರಮಾಣ ಸುಮಾರು ೭೦% ರಷ್ಟಿದೆ ಎಂದು ಗಾಜಾದ ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ. ಅಲ್ಲದೆ ಆರೋಗ್ಯ ಸಚಿವಾಲಯ ನೀಡಿರುವ ದಾಖಲೆಗಳು ನಂಬಲರ್ಹವೆಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ತುರ್ತು ನಿರ್ದೇಶಕ ರಿಚರ್ಡ್ ಬ್ರೆನ್ನನ್ ಅವರು ತಿಳಿಸಿದ್ದಾರೆ. ಯಾವುದೇ ಯುದ್ಧ ವಲಯದಲ್ಲಿ ಮೃತಪಟ್ಟ ಸಂಖ್ಯೆಯನ್ನು ಎಣಿಸುವುದು ಒಂದು ಸವಾಲಾಗಿದ್ದು, ನಾಶವಾದ ಕಟ್ಟಡಗಳ ಅವಶೇಷಗಳಡಿಯಲ್ಲಿ ಹೂತುಹೋಗಿರುವ ಅಥವಾ ಆಸ್ಪತ್ರೆಗಳಿಗೆ ಕೊಂಡೊಯ್ಯದ ದೇಹಗಳನ್ನು ಒಳಗೊಂಡಿರದ ಕಾರಣ ಸಾವಿನ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಗಾಜಾದ ವೈದ್ಯರು ಹೇಳುತ್ತಾರೆ. ಇನ್ನು ಮೃತಪಟ್ಟಿದ್ದಾರೆ ಎನ್ನಲಾದ ೨೦ ಸಾವಿರ ಮಂದಿಯು ಗಾಜಾದ ೨೨ ಲಕ್ಷ ನಾಗರಿಕರ ೧ ಒಂದು ಪ್ರತಿಶತವಾಗಿದ್ದಾರೆ. ಅಮೆರಿಕಾದ ಗುಪ್ತಚರ ಮೌಲ್ಯಮಾಪನಗಳ ಪ್ರಕಾರ, ಗಾಜಾ ಯುದ್ಧ ಪ್ರಾರಂಭವಾದಾಗಿನಿಂದ ಮತ್ತು ಡಿಸೆಂಬರ್ ಮಧ್ಯದಲ್ಲಿ ಇಸ್ರೇಲ್ ಗಾಜಾದ ಮೇಲೆ ಸುಮಾರು ೨೯,೦೦೦ ಕ್ಕೂ ಹೆಚ್ಚು ಬಾಂಬ್‌ಗಳನ್ನು ಹಾಕಿದೆ ಎನ್ನಲಾಗಿದೆ. ಈ ಪೈಕಿ ೪೫ ಪ್ರತಿಶತದಷ್ಟು ಬಾಂಬ್‌ಗಳು ನಿರ್ದೇಶಿತವಾಗಿಲ್ಲ ಎನ್ನಲಾಗಿದೆ. ಹಾಗಾಗಿ ಈ ೪೫ ಪ್ರತಿಶತ ಬಾಂಬ್‌ಗಳು ಎಲ್ಲೆಂದರಲ್ಲಿ ಬಿದ್ದಿದ್ದು, ನಾಗರಿಕರ ಮೃತರ ಪ್ರಮಾಣ ಹೆಚ್ಚಾಗಿದೆ ಎನ್ನಲಾಗಿದೆ.