ಗಾಜಾದ ಕೆಲವೆಡೆ ಸೇನೆ ಹಿಂಪಡೆದ ಇಸ್ರೇಲ್

ಟೆಲ್ ಅವೀವ್ (ಇಸ್ರೇಲ್), ಜ.೨- ಒಂದೆಡೆ ಗಾಜಾದಲ್ಲಿ ಇಸ್ರೇಲ್ ಸೇನಾಪಡೆ ತೀವ್ರ ರೀತಿಯಲ್ಲಿ ಬಾಂಬ್ ದಾಳಿ ನಡೆಸುತ್ತಿದ್ದರೆ ಮತ್ತೊಂದೆಡೆ ಗಾಜಾದ ಕೆಲವು ಕಡೆಗಳಿಂದ ಸೂಕ್ತ ರಣತಂತ್ರದ ಭಾಗವಾಗಿ ಸೈನಿಕಕರು ಹಾಗೂ ಟ್ಯಾಂಕ್‌ಗಳನ್ನು ಹಿಂಪಡೆದುಕೊಂಡಿದೆ. ಇದರ ಹೊರತಾಗಿಯೂ ಯುದ್ದ ಮತ್ತಷ್ಟು ತಿಂಗಳುಗಳ ಕಾಲ ಮುಂದುವರೆಯಲಿದೆ ಎಂದು ಇಸ್ರೇಲ್ ತಿಳಿಸಿದೆ.
ಗಾಜಾಗೆ ನುಗ್ಗಿ ಹಮಾಸ್ ಪಡೆ ವಿರುದ್ಧ ದಾಳಿ ನಡೆಸುತ್ತಿದ್ದ ಇಸ್ರೇಲ್ ಇದೀಗ ಗಾಜಾದ ಕೆಲವರು ಕಡೆಗಳಲ್ಲಿ ತನ್ನ ಸೇನಾ ರಣತಂತ್ರದಲ್ಲಿ ಬದಲಾವಣೆ ಮಾಡಿಕೊಂಡಿದೆ. ಪ್ರಸಕ್ತ ತಿಂಗಳಲ್ಲೇ ಸಾವಿರಾರು ಸೈನಿಕರ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದೆ. ಉತ್ತರಾರ್ಧದಲ್ಲಿ ಕಾರ್ಯಾಚರಣೆ ಬಹುತೇಕ ಯಶಸ್ವಿಯಾಗಿದ್ದು ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುವ ಸಮಯ ಹತ್ತಿರದಲ್ಲಿರುವುದರಿಂದ ಕೆಲವು ಪ್ರದೇಶಗಳಿಂದ ಸೇನೆಯನ್ನು ಹಿಂಪಡೆಯಲಾಗುತ್ತಿದೆ ಎನ್ನಲಾಗಿದೆ. ಆದರೆ ಗಾಜಾದ ಇತರ ಪ್ರದೇಶಗಳಲ್ಲಿ, ವಿಶೇಷವಾಗಿ ದಕ್ಷಿಣದ ಖಾನ್ಯೂನಿಸ್ ಮತ್ತು ಕೇಂದ್ರ ಪ್ರದೇಶಗಳಲ್ಲಿ ಭೀಕರ ಯುದ್ಧ ಮುಂದುವರಿದಿದೆ. ಗಾಜಾವನ್ನು ೧೬ ವರ್ಷದಿಂದ ಆಳುತ್ತಿರುವ ಹಮಾಸ್ ಅನ್ನು ನಿರ್ಮೂಲನೆ ಮಾಡುವವರೆಗೆ ಯುದ್ಧ ಮುಂದುವರಿಯುತ್ತದೆ ಎಂದು ಇಸ್ರೇಲ್ ಘೋಷಿಸಿದೆ. ಅಮೆರಿಕದ ವಿದೇಶಾಂಗ ಸಚಿವ ಅಂಥೋನಿ ಬ್ಲಿಂಕೆನ್ ಗಾಜಾ ಪ್ರದೇಶಕ್ಕೆ ಭೇಟಿ ನೀಡಲಿರುವ ಸಂದರ್ಭದಲ್ಲೇ ಇಸ್ರೇಲ್ ಗಾಜಾದಿಂದ ಸೇನೆ ಹಿಂಪಡೆಯುವುದಾಗಿ ಘೋಷಿಸಿದೆ. ಇನ್ನು ಪೂರ್ವ ಮೆಡಿಟರೇನಿಯನ್‌ಗೆ ನಿಯೋಜಿಸಲ್ಪಟ್ಟ ಅಮೆರಿಕಾದ ವಿಮಾನವಾಹಕ ನೌಕೆ ಜೆರಾಲ್ಡ್ ಆರ್ ಫೋರ್ಡ್ ಇದೀಗ ವರ್ಜೀನಿಯಾದ ತನ್ನ ತವರು ಬಂದರಿಗೆ ಹಿಂತಿರುಗುತ್ತಿದೆ ಎಂದು ಅಮೆರಿಕಾ ನೌಕಾಪಡೆ ಘೋಷಿಸುತ್ತಿದ್ದಂತೆ ಇಸ್ರೇಲ್ ಗಾಜಾದ ಕೆಲವು ಕಡೆಗಳಲ್ಲಿ ತನ್ನ ಸೇನೆ ಹಾಗೂ ಟ್ಯಾಂಕ್‌ಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ. ಇನ್ನು ಇಸ್ರೇಲ್ ಹಿಂದಕ್ಕೆ ಕರೆಸಿಕೊಂಡಿರುವುದರಿಂದ ಕೆಲವರು ನಾಗರಿಕ ಜೀವನಕ್ಕೆ ಮರಳಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಯುದ್ದದಿಂದ ಜರ್ಝರಿತವಾಗಿರುವ ಇಸ್ರೇಲ್‌ನ ಆರ್ಥಿಕತೆಗೂ ಕೊಂಚ ಸುಧಾರಣೆಗೆ ಅವಕಾಶ ನೀಡುತ್ತದೆ. ಮುಖ್ಯವಾಗಿ ಒಂದು ವೇಳೆ ಉತ್ತರದಲ್ಲಿ ಲೆಬನಾನ್‌ನಲ್ಲಿನ ಇರಾನ್ ಬೆಂಬಲಿತ ಹೆಜ್ಬುಲ್ಲಾದೊಂದಿಗಿನ ವ್ಯಾಪಕ ಸಂಘರ್ಷದ ಸಂದರ್ಭದಲ್ಲಿ ಘಟಕಗಳನ್ನು ಮುಕ್ತಗೊಳಿಸುತ್ತದೆ ಎಂದು ಇಸ್ರೇಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಮಧ್ಯೆ, ಖಾನ್ಯೂನಿಸ್ ನಗರದ ಪಶ್ಚಿಮ ಮತ್ತು ಮಧ್ಯಭಾಗದಲ್ಲಿ ರವಿವಾರ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವರು ಮೃತಪಟ್ಟಿದ್ದು ವ್ಯಾಪಕ ಹಾನಿ ಸಂಭವಿಸಿದೆ. ಗ್ರಾಮೀಣ ನಿರಾಶ್ರಿತರ ಶಿಬಿರದ ಮೇಲೆಯೂ ವೈಮಾನಿಕ ದಾಳಿ ನಡೆದಿರುವ ವರದಿಯಾಗಿದೆ ಎಂದು ‘ಫೆಲೆಸ್ತೀನಿಯನ್ ರೆಡ್ಕ್ರೆಸೆಂಟ್’ ವರದಿ ಮಾಡಿದೆ.

ಮುಂದಿನ ವಾರ ತರಬೇತಿ ಮತ್ತು ವಿರಾಮದ ಉದ್ದೇಶದಿಂದ ೫ ತುಕಡಿಗಳು, ಹಲವು ಸಾವಿರ ಯೋಧರನ್ನು ಗಾಝಾದಿಂದ ಹಿಂದಕ್ಕೆ ಕರೆಸಿಕೊಳ್ಳಲಾಗುತ್ತಿದೆ. ಯುದ್ಧದ ಉದ್ದೇಶಗಳಿಗೆ ದೀರ್ಘಾವಧಿಯ ಹೋರಾಟದ ಅಗತ್ಯವಿದೆ ಮತ್ತು ಅದಕ್ಕೆ ಅನುಗುಣವಾಗಿ ನಾವು ಸನ್ನದ್ಧರಾಗುತ್ತಿದ್ದೇವೆ.
ಅಡ್ಮಿರಲ್ ಡೇನಿಯಲ್ ಹೆಗಾರಿ, ಇಸ್ರೇಲ್ ಸೇನಾ ವಕ್ತಾರ

೨೦೨೪ರಲ್ಲೂ ಸಂಘರ್ಷ ಮುಂದುವರಿಕೆ
ಈಗಾಗಲೇ ಇಸ್ರೇಲ್-ಹಮಾಸ್ ನಡುವಿನ ಕದನಕ್ಕೆ ಬಹುತೇಕ ಎರಡು ತಿಂಗಳು ಪೂರ್ಣಗೊಳುತ್ತಿದ್ದಂತೆ ಕದನ ಮತ್ತಷ್ಟು ಮುಂದುವರೆಯುವ ಸಾಧ್ಯತೆ ಹೆಚ್ಚಿದೆ. ೨೦೨೪ರಲ್ಲೂ ಸಮರ ಮುಂದುವರೆಯಲಿದೆ ಎಂದು ಇಸ್ರೇಲ್ ಸೇನಾಪಡೆ ತಿಳಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಡಿಫೆನ್ಸ್ ಫೋರ್ಸ್ (ಐಡಿಎಫ್) ವಕ್ತಾರ ಅಡ್ನಿರಲ್ ಡೇನಿಯಲ್ ಹೆಗಾರಿ, ದೀರ್ಘಕಾಲದ ಹೋರಾಟಕ್ಕೆ ತಯಾರಾಗಲು ಪಡೆಗಳ ನಿಯೋಜನೆಯನ್ನು ಸರಿಹೊಂದಿಸಲಾಗುತ್ತಿದೆ. ಆದರೆ ಮರುಸಂಗ್ರಹಿಸಲು ಅನುಮತಿಸಲು ಕೆಲವು ಪಡೆಗಳನ್ನು ಹಿಂತೆಗೆದು ಕೊಳ್ಳಲಾಗುವುದು. ಈ ರೀತಿಯ ರಣತಂತ್ರವನ್ನು ೨೦೨೪ರಲ್ಲಿ ಯುದ್ಧವನ್ನು ಮುಂದುವರೆಸಲು ಯೋಜನೆ ಮತ್ತು ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಹೆಚ್ಚುವರಿ ಕಾರ್ಯಾಚರಣೆಗಳು ಇರಲಿದ್ದು, ಹೋರಾಟವು ಪ್ರಸಕ್ತ ವರ್ಷದ ಉಳಿದ ಭಾಗದಲ್ಲಿ ಮುಂದುವರಿಯುತ್ತದೆ ಎಂಬ ತಿಳುವಳಿಕೆಯಿಂದ ಐಡಿಎಫ್ ಮುಂದೆ ಯೋಜಿಸಬೇಕಿದೆ ಎಂದು ತಿಳಿಸಿದ್ದಾರೆ.