ಗಾಜಾದಿಂದ ಆಮದು ಸ್ಥಗಿತಗೊಳಿಸಿದ ಇಸ್ರೇಲ್

ಜೆರುಸಲೇಂ, ಸೆ.೬- ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುವ ಪ್ರಯತ್ನ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗಾಝಾದಿಂದ ಎಲ್ಲಾ ರೀತಿಯ ಆಮದನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಇಸ್ರೇಲ್ ಸೇನೆ ಮತ್ತು ರಕ್ಷಣಾ ಸಚಿವಾಲಯ ಹೇಳಿದೆ.
ಇತ್ತೀಚೆಗೆ ಕೆರೆಮ್ ಶಲೋಮ್ ಗಡಿದಾಟು (ಕ್ರಾಸಿಂಗ್)ನಲ್ಲಿ ಮೂರು ಟ್ರಕ್‌ಗಳಲ್ಲಿ ತುಂಬಿಸಿದ್ದ ಜವಳಿಯ ಸರಕಿನಡಿ ಭಾರೀ ಪ್ರಮಾಣದ ಅತ್ಯಾಧುನಿಕ ಸ್ಫೋಟಕ ವಸ್ತುಗಳನ್ನು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಇಸ್ರೇಲ್ ಮತ್ತು ಫೆಲಸ್ತೀನ್ ನಡುವಿನ ಗಡಿಪ್ರದೇಶದ ಗಡಿದಾಟುಗಳನ್ನು ಇಸ್ರೇಲ್‌ನ ರಕ್ಷಣಾ ಇಲಾಖೆ ನಿಯಂತ್ರಿಸುತ್ತಿದೆ. ರಕ್ಷಣಾ ಸಚಿವ ಯೊವಾವ್ ಗ್ಯಾಲಂಟ್‌ರ ಅನುಮೋದನೆ ಪಡೆದು ರಕ್ಷಣಾ ಸಿಬಂದಿ ವಿಭಾಗದ ಮುಖ್ಯಸ್ಥ ಹೆರ್ಝೆಯ್ ಹಲೇವಿ ಗಾಝಾದಿಂದ ಇಸ್ರೇಲ್‌ಗೆ ವಾಣಿಜ್ಯ ವಿತರಣೆಗಳ ಸ್ಥಗಿತಕ್ಕೆ ಆದೇಶಿಸಿದ್ದಾರೆ. ಇದು ಗಡಿದಾಟಿನಲ್ಲಿ ಭದ್ರತಾ ವ್ಯವಸ್ಥೆಯ ಹೊಂದಾಣಿಕೆಗೆ ಅನುವು ಮಾಡಿಕೊಡುತ್ತದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಸರಕು ಪೂರೈಕೆ ಮರು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು. ಮಾನವೀಯ ಸೌಲಭ್ಯಗಳ ಪ್ರಯೋಜನವನ್ನು ಭಯೋತ್ಪಾದಕ ಸಂಘಟನೆಗಳು ಭಯೋತ್ಪಾದನೆಯ ಕಾರ್ಯಕ್ಕೆ ಬಳಸುವುದಕ್ಕೆ ಅವಕಾಶ ನೀಡಲಾಗದು’ ಎಂದು ಹೇಳಿಕೆ ತಿಳಿಸಿದೆ. ೨೦೦೭ರಲ್ಲಿ ಫೆಲಸ್ತೀನೀಯರ ಸಶಸ್ತ್ರ ಗುಂಪು ಹಮಾಸ್ ಗಾಝಾ ಪಟ್ಟಿಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಗಾಝಾ ಪಟ್ಟಿಯು ಇಸ್ರೇಲ್‌ನ ದಿಗ್ಬಂಧನಲ್ಲಿದೆ. ಇಸ್ರೇಲ್ ಮತ್ತು ಗಾಜಾದ ನಡುವೆ ಸರಕು ಸಾಗಾಟಕ್ಕೆ ಕೆರೆಮ್ ಶಲೋಮ್ ಏಕೈಕ ಗಡಿದಾಟು ಇದಾಗಿದೆ. ಇನ್ನು ಗಾಝಾದಿಂದ ರಫ್ತುಗಳ ಮೇಲಿನ ನಿಷೇಧವನ್ನು ಇಸ್ರೇಲ್ ತಕ್ಷಣ ಹಿಂದಕ್ಕೆ ಪಡೆಯಬೇಕು. ಈ ನಿಷೇಧವು ಗಾಝಾ ಪಟ್ಟಿಯಲ್ಲಿರುವ ಸಾವಿರಾರು ಕುಟುಂಬಗಳನ್ನು ಇನ್ನಷ್ಟು ಅನಿಶ್ಚಿತತೆಯಲ್ಲಿ ಮುಳುಗಿಸಲಿದೆ ಎಂದು ಫೆಲಸ್ತೀನೀಯರು ಆಗ್ರಹಿಸಿದ್ದಾರೆ. ಗಾಝಾದಿಂದ ಇಸ್ರೇಲ್ ಹಾಗೂ ಪಶ್ಚಿಮದಂಡೆಗೆ ಮೀನು ಹಾಗೂ ಇತರ ಸಮುದ್ರ ಖಾದ್ಯಗಳು ಹೆಚ್ಚಾಗಿ ರಫ್ತಾಗುತ್ತಿವೆ. ರಫ್ತು ಸ್ಥಗಿತಗೊಂಡರೆ ಸ್ಥಳೀಯವಾಗಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಪರಿಸ್ಥಿತಿ ಬರಲಿದೆ ಎಂದು ಗಾಝಾದ ವ್ಯಾಪಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.