ಗಾಜಾದಲ್ಲಿ ಇಸ್ರೇಲ್ ಸಚಿವನ ಪುತ್ರ ಸಾವು

ಟೆಲ್ ಅವೀವ್ (ಇಸ್ರೇಲ್), ಡಿ.೮- ಗಾಜಾದಲ್ಲಿ ಇಸ್ರೇಲ್ ಹಾಗೂ ಹಮಾಸ್ ನಡುವಿನ ಕದನ ವಿಕೋಪಕ್ಕೆ ತಿರುಗಿರುವ ನಡುವೆಯೇ ಇದೀಗ ಇಸ್ರೇಲ್‌ನ ಮಾಜಿ ಸೇನಾ ಮುಖ್ಯಸ್ಥ, ದೇಶದ ಯುದ್ದ ಕ್ಯಾಬಿನೆಟ್ ಸಚಿವರಾಗಿರುವ ಗಾಡಿ ಐಸೆನ್‌ಕೋಟ್ ಅವರ ಪುತ್ರನನ್ನು ಗಾಜಾದಲ್ಲಿ ಹತ್ಯೆ ನಡೆಸಲಾಗಿದೆ ಎನ್ನಲಾಗಿದೆ.
ಸೇನಾಧಿಕಾರಿ ಕೂಡ ಆಗಿರುವ ೨೫ ವರ್ಷದ ಮೇಜರ್ ಗಾಲ್ ಮೇರ್ ಐಸೆನ್‌ಕೋಟ್ ಉತ್ತರ ಗಾಜಾದಲ್ಲಿ ನಿಧನರಾದರು ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ. ಸುರಂಗದ ಶಾಫ್ಟ್ ಸ್ಫೋಟಗೊಂಡ ನಂತರ ಮೇಜರ್ ಐಸೆನ್‌ಕೋಟ್ ಅವರು ತೀವ್ರವಾಗಿ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗಂಭೀರ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಯಲ್ಲಿ ನಿಧನರಾದರು ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಗಾಡಿ ಐಸೆನ್‌ಕೋಟ್ ಅವರು ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಸದರ್ನ್ ಕಮಾಂಡ್‌ಗೆ ಭೇಟಿ ನೀಡುತ್ತಿದ್ದಾಗ ಅವರ ಮಗನ ಗಾಯಗಳ ಬಗ್ಗೆ ತಿಳಿಸಲಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇನ್ನು ಗಾಲ್ ಅವರ ನಿಧನಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಅವರ ಪತ್ನಿ ಸಂತಾಪ ವ್ಯಕ್ತಪಡಿಸಿದ್ದು, ಅವರೊಬ್ಬ ನಿಜವಾದ ಹೀರೋ. ನಮ್ಮ ವೀರರು ವ್ಯರ್ಥವಾಗಿ ಬಿದ್ದಿಲ್ಲ. ನಾವು ವಿಜಯದವರೆಗೆ ಹೋರಾಡುತ್ತೇವೆ ಎಂದು ಕಂಬನಿ ಮಿಡಿದಿದ್ದಾರೆ. ಅಲ್ಲದೆ ಹಲವಾರು ಇಸ್ರೇಲಿ ಸರ್ಕಾರಿ ಅಧಿಕಾರಿಗಳು ಮತ್ತು ಶಾಸಕರು ಐಸೆನ್‌ಕೋಟ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಇನ್ನು ಗಾಡಿ ಐಸೆನ್‌ಕೋಟ್ (೬೩) ನಿವೃತ್ತ ಜನರಲ್ ಆಗಿದ್ದು, ಅವರು ೨೦೧೫-೧೯ರ ಅವಧಿಯಲ್ಲಿ ಇಸ್ರೇಲ್‌ನ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆ ಅಲಂಕರಿಸಿದ್ದರು. ನ್ಯಾಷನಲ್ ಯೂನಿಟಿ ಪಕ್ಷದ ಶಾಸಕರಾಗಿರುವ ಗಾಲ್ ಅವರು, ಅಕ್ಟೋಬರ್ ೭ ರಂದು ಇಸ್ರೇಲ್ ಮೇಲೆ ಹಮಾಸ್ ದಾಳಿ ನಡೆಸಿ ಸುಮಾರು ೧,೨೦೦ ಜನರನ್ನು ಕೊಂದು ೨೪೦ ಒತ್ತೆಯಾಳುಗಳನ್ನು ತೆಗೆದುಕೊಂಡ ಬಳಿಕ ಸ್ಥಾಪಿಸಲಾಗಿದ್ದ ನೆತನ್ಯಾಹು ಅವರ ತುರ್ತು ಸರ್ಕಾರದ ಪ್ರಸ್ತುತ ಸದಸ್ಯರೂ ಆಗಿದ್ದಾರೆ.