ಗಾಜಾದಲ್ಲಿ ಇಸ್ರೇಲ್ ದಾಳಿ ಬಿರುಸು

ಗಾಜಾ, ಡಿ.೪- ಕದನ ವಿರಾಮ ಅಂತ್ಯಗೊಂಡ ನಡುವೆ ಇದೀಗ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಪಡೆ ದಾಳಿ ಮುಂದುವರೆಸಿದ್ದು, ಭಾನುವಾರ ಕೂಡ ಭೀಕರ ಬಾಂಬ್ ದಾಳಿ ನಡೆಸಿದೆ. ಈ ನಡುವೆ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಸೇನಾಪಡೆ, ಗಾಜಾ ಪಟ್ಟಿಯಾದ್ಯಂತ ನಮ್ಮ ಭೂದಳದ ಪಡೆಗಳು ಸಕ್ರಿಯವಾಗಿದೆ ಎಂದು ತಿಳಿಸಿದೆ.
ದಕ್ಷಿಣದ ನಗರವಾದ ಖಾನ್ ಯೂನಿಸ್‌ನಿಂದ ಸುಮಾರು ೨ ಕಿಮೀ ದೂರದಲ್ಲಿ ಇಸ್ರೇಲಿ ಪಡೆಗಳೊಂದಿಗೆ ನಮ್ಮ ಹೋರಾಟಗಾರರು ಕಾದಾಟ ನಡೆಸಿದ್ದಾರೆ ಎಂದು ಹಮಾಸ್ ಗುಂಪು ಹೇಳಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ದಾಳಿಯ ಬಳಿಕ ಇಲ್ಲಿಗೆ ಸ್ಥಳಾಂತರಗೊಂಡಿದ್ದ ನಾಗರಿಕರು ಇದೀಗ ಮತ್ತೆ ಭೀತಿಯಿಂದ ಜೀವಿಸುವಂತಾಗಿದೆ. ಇನ್ನು ಇಸ್ರೇಲಿ ಸೇನೆಯು ಈ ಹಿಂದೆ ನಗರ ಮತ್ತು ಸಮೀಪದಲ್ಲಿರುವ ಕೆಲವು ಪ್ರದೇಶಗಳನ್ನು ಸ್ಥಳಾಂತರಿಸುವಂತೆ ಜನರಿಗೆ ಆದೇಶ ನೀಡಿತ್ತು. ಆದರೆ ಯಾವುದೇ ಹೊಸ ದಕ್ಷಿಣ ನೆಲದ ದಾಳಿಯ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ. ಈ ನಡುವೆ ಟೆಲ್ ಅವೀವ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಡಿಫೆನ್ಸ್ ಫೊರ್ಸ್ (ಐಡಿಎಫ್)ನ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, ಎಲ್ಲಾ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಕೇಂದ್ರಗಳ ವಿರುದ್ಧ ಐಡಿಎಫ್ ತನ್ನ ನೆಲದ ಕಾರ್ಯಾಚರಣೆಯನ್ನು ವಿಸ್ತರಿಸುವುದನ್ನು ಮುಂದುವರೆಸಿದೆ. ಸದ್ಯ ನಮ್ಮ ಪಡೆಗಳು ಭಯೋತ್ಪಾದಕರೊಂದಿಗೆ ಮುಖಾಮುಖಿಯಾಗಿದ್ದು, ಅವರನ್ನು ಹೊಡೆದುರುಳಿಸುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಇಸ್ರೇಲ್ ಸರ್ಕಾರದ ವಕ್ತಾರ ಎಲಾನ್ ಲೆವಿ, ಖಾನ್ ಯೂನಿಸ್ ಪ್ರದೇಶದಲ್ಲಿ ವ್ಯಾಪಕವಾದ ವೈಮಾನಿಕ ದಾಳಿಗಳು ಸೇರಿದಂತೆ ಕಳೆದ ವಾರಾಂತ್ಯದಲ್ಲಿ ಇಸ್ರೇಲ್ ಸೇನೆಯು ೪೦೦ ಕ್ಕೂ ಹೆಚ್ಚು ಗುರಿಗಳ ಮೇಲೆ ದಾಳಿ ನಡೆಸಿದೆ. ಇಲ್ಲಿ ಹಮಾಸ್ ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ದು, ಅಲ್ಲದೆ ಉತ್ತರದ ಬೀಟ್ ಲಾಹಿಯಾದಲ್ಲಿ ಅವರ ಮೂಲಸೌಕರ್ಯವನ್ನು ಕೂಡ ನಾಶಪಡಿಸಿದೆ ಎಂದು ಅವರು ತಿಳಿಸಿದ್ದಾರೆ.

ಇಸ್ರೇಲ್ ಹಡಗುಗಳ ಮೇಲೆ ದಾಳಿ
ಈ ನಡುವೆ ಗಾಜಾದಲ್ಲಿನ ಹಮಾಸ್ ಉಗ್ರರಿಗೆ ಬೆಂಬಲವಾಗಿ ಹೌಥಿ ಗುಂಪು ಕೆಂಪು ಸಮುದ್ರದಲ್ಲಿ ತನ್ನ ದಾಳಿಯನ್ನು ಮುಂದುವರೆಸುತ್ತಿದೆ. ದಕ್ಷಿಣ ಕೆಂಪು ಸಮುದ್ರದ ಅಂತಾರಾಷ್ಟ್ರೀಯ ನೀರಿನಲ್ಲಿ ಮೂರು ವಾಣಿಜ್ಯ ಹಡಗುಗಳು ದಾಳಿಗೆ ಒಳಗಾದವು ಎಂದು ಯೆಮೆನ್‌ನ ಹೌಥಿ ಗುಂಪು ತಿಳಿಸಿದೆ. ಇದರ ಬಗ್ಗೆ ಮಾಹಿತಿ ನೀಡಿರುವ ಯುಎಸ್ ಮಿಲಿಟರಿ, ಇಲ್ಲಿ ಇಸ್ರೇಲ್‌ನ ಎರಡು ಹಡಗುಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ. ತನ್ನ ನೌಕಾಪಡೆಯು ಯೂನಿಟಿ ಎಕ್ಸ್‌ಪ್ಲೋರರ್ ಮತ್ತು ನಂಬರ್ ೯ ಎಂಬ ಎರಡು ಇಸ್ರೇಲಿ ಹಡಗುಗಳ ಮೇಲೆ ಸಶಸ್ತ್ರ ಡ್ರೋನ್ ಮತ್ತು ನೌಕಾ ಕ್ಷಿಪಣಿಯೊಂದಿಗೆ ದಾಳಿ ಮಾಡಿದೆ ಎಂದು ಯೆಮೆನ್‌ನ ಹೌಥಿ ಗುಂಪು ತಿಳಿಸಿದೆ. ಈ ದಾಳಿಗಳು ಯೆಮೆನ್ ಜನರ ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿವೆದ್ದು, ಅಲ್ಲದೆ ಪ್ಯಾಲೆಸ್ತೀನಿಯನ್ ಜನರೊಂದಿಗೆ ನಿಲ್ಲಲು ಇಸ್ಲಾಮಿಕ್ ರಾಷ್ಟ್ರಗಳ ಕರೆಗಳಿಗೆ ಪ್ರತಿಕ್ರಿಯೆಯಾಗಿವೆ ಎಂದು ಗುಂಪು ತಿಳಿಸಿದೆ.

ಒತ್ತೆಯಾಳು-ಕೈದಿಗಳ ವಿನಿಮಯ ಸಾಧ್ಯವಿಲ್ಲ
ಗಾಜಾದಲ್ಲಿ ಕದನ ವಿರಾಮ ಜಾರಿಗೊಳ್ಳದೆ ಒತ್ತೆಯಾಳು-ಕೈದಿಗಳ ವಿನಿಮಯ ಸಾಧ್ಯವಿಲ್ಲ ಎಂದು ಹಮಾಸ್ ಉಪಮುಖ್ಯಸ್ಥ ಸಲೇಹ್ ಅಲ್-ಅರೌರಿಯನ್ನು ಉಲ್ಲೇಖಿಸಿ ಅಲ್‌ಜಝೀರಾ ವರದಿ ಮಾಡಿದೆ. ಇಸ್ರೇಲಿ ಯೋಧರು ಮತ್ತು ಇಸ್ರೇಲ್ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ಇಸ್ರೇಲ್ ನಾಗರಿಕರು ಇನ್ನೂ ಒತ್ತೆಯಾಳುಗಳಾಗಿದ್ದಾರೆ. ಗಾಜಾದಲ್ಲಿ ಕದನ ವಿರಾಮ ಜಾರಿಯಾಗದೆ ಮತ್ತು ಎಲ್ಲಾ ಫ್ಯಾಲೆಸ್ತೀನಿಯನ್ ಕೈದಿಗಳು ಬಿಡುಗಡೆಗೊಳ್ಳದೆ ಇವರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಯುದ್ಧ ಅದರದ್ದೇ ದಿಕ್ಕಿನಲ್ಲಿ ಸಾಗಲಿ. ಈ ನಿರ್ಧಾರ ಅಂತಿಮ. ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ. ಈ ನಡುವೆ ರವಿವಾರ ಉತ್ತರ ಗಾಜಾದ ಹಮಾಸ್ ನೆಲೆಯನ್ನು ಗುರಿಯಾಗಿಸಿ ಇಸ್ರೇಲ್ ವಾಯುಪಡೆ ಹಾಗೂ ಫಿರಂಗಿ ದಳ ಬೃಹತ್ ದಾಳಿ ನಡೆಸಿದೆ. ಗಾಜಾದಿಂದ ಇಸ್ರೇಲ್ ಪ್ರದೇಶದತ್ತ ಹಾರಿಬಿಡಲಾದ ರಾಕೆಟ್‌ಗಳನ್ನು ಇಸ್ರೇಲ್ ವಾಯುರಕ್ಷಣಾ ವ್ಯವಸ್ಥೆ ತುಂಡರಿಸಿದೆ. ಗಾಜಾದ ಮೇಲೆ ನಡೆಸಿದ ಡ್ರೋನ್ ದಾಳಿಯಲ್ಲಿ ಹಮಾಸ್‌ನ ಐವರು ಸದಸ್ಯರು ಮೃತಪಟ್ಟಿದ್ದಾರೆ. ಯುದ್ಧವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ಹಮಾಸ್‌ನ ರಹಸ್ಯ ಕಾರ್ಯಾಚರಣೆ ಕೇಂದ್ರ ಹಾಗೂ ಶಸ್ತ್ರಾಸ್ತ್ರ ಸಂಗ್ರಹ ವ್ಯವಸ್ಥೆಯನ್ನು ನಾಶಗೊಳಿಸಿವೆ ಎಂದು ಇಸ್ರೇಲ್ ಸೇನೆ ಹೇಳಿದೆ.