ಗಾಜಾಗೆ ಹೊಸ ನೆರವು ಮಾರ್ಗ ತೆರೆಯಲಿರುವ ಇಸ್ರೇಲ್

ಗಾಜಾ, ಎ.೫- ತೀವ್ರ ರೀತಿಯ ದಾಳಿಯ ಹಿನ್ನೆಲೆಯಲ್ಲಿ ಗಾಜಾದಿಂದ ಮಾನವೀಯ ಹಾಗೂ ನೆರವು ಸಂಘಟನೆಗಳು ತಮ್ಮ ಕಾರ್ಯಾಚರಣೆ ಸ್ಥಗಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಇದೀಗ ಇಸ್ರೇಲ್ ಇಲ್ಲಿನ ಭೂಪ್ರದೇಶಕ್ಕೆ ಹೆಚ್ಚಿನ ಸಹಾಯ ಕಲ್ಪಿಸುವ ಸಲುವಾಗಿ ಎರಡು ಮಾನವೀಯ ಮಾರ್ಗಗಳನ್ನು ತೆರೆಯಲು ಅವಕಾಶ ನೀಡಿದೆ. ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಜೊತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ಫೋನ್ ಸಂಭಾಷನೆ ನಡೆಸಿದ ಬಳಿಕ ಈ ನಿರ್ಧಾರ ಹೊರಬಿದ್ದಿದೆ.
ಇತ್ತೀಚಿಗಿನ ದಿನಗಳಲ್ಲಿ ಗಾಜಾದಲ್ಲಿ ಇಸ್ರೇಲ್ ಸೇನಾಪಡೆ ತೀವ್ರ ರೀತಿಯಲ್ಲಿ ದಾಳಿ ನಡೆಸುತ್ತಿದೆ. ಪರಿಣಾಮ ನೆರವು ಸಂಘಟನೆಗಳು ತಮ್ಮ ಕಾರ್ಯಾಚರಣೆ ನಡೆಸುವಲ್ಲಿ ಕೂಡ ತೊಡಕುಂಟಾಗಿತ್ತು. ಅದೂ ಅಲ್ಲದೆ ನೆರವು ಸಂಘಟನೆಗಳ ಸಿಬ್ಬಂದಿ ಕೂಡ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದು, ಪರಿಣಾಮ ಜಾಗತಿಕ ಮಟ್ಟದಲ್ಲಿ ಕೂಡ ಆಕ್ರೋಶಕ್ಕೆ ಕಾರಣವಾಗಿತ್ತು. ನೆರವು ಸಂಘಟನೆಯ ಏಳು ಮಂದಿ ಸಿಬ್ಬಂದಿ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಅಮೆರಿಕಾ ಅಸಮಾಧಾನ ಹೊಂದಿತ್ತು. ಅಲ್ಲದೆ ಈ ವಿಚಾರದ ಬಗ್ಗೆ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಬಳಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಮಾತುಕತೆ ನಡೆಸಿದ್ದರು. ಒಂದು ವೇಳೆ ಅಮೆರಿಕಾ ಬೆಂಬಲ ಬೇಕಿದ್ದರೆ ಗಾಜಾದಲ್ಲಿ ನಾಗರಿಕ ಹಾನಿ ಮತ್ತು ಮಾನವೀಯ ದುಃಖವನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬೆಂಜಮಿನ್‌ಗೆ ಬೈಡೆನ್ ಸೂಚಿಸಿದ್ದರು ಎಂದು ಹೇಳಲಾಗಿದೆ. ಅಲ್ಲದೆ ನೆರವು ಕಾರಿಡಾರ್ ತೆರೆಯುವ ಬಗ್ಗೆ ಕೂಡ ಬೆಂಜಮಿನ್ ಬಳಿಕ ಬೈಡೆನ್ ವಿನಂತಿ ಮಾಡಿದ್ದರು ಎನ್ನಲಾಗಿದೆ. ನಾಗರಿಕ ಹಾನಿಯನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಿ ಮತ್ತು ಸಹಾಯ ಕಾರ್ಯಕರ್ತರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಿ ಅಥವಾ ಗಾಜಾಗೆ ಸಂಬಂಧಿಸಿದಂತೆ ಅಮೆರಿಕಾ ನೀತಿ ಬದಲಾಗಲಿದೆ ಎಂದು ಬೈಡೆನ್ ಕಟುಸಂದೇಶ ರವಾನಿಸಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಮಾತುಕತೆ ನಡೆದ ಕೆಲವೇ ಗಂಟೆಗಳಲ್ಲಿ ಇದೀಗ ಇಸ್ರೇಲ್ ಈ ನಿರ್ಧಾರ ಪ್ರಕಟಿಸಿದೆ. ಅದರಲ್ಲೂ ಮುಖ್ಯವಾಗಿ ಸದ್ಯ ಗಾಜಾದಲ್ಲಿ ಆಹಾರ ಹಾಗೂ ನೀರಿನ ವಿಪರೀತ ಕೊರತೆ ಉಂಟಾಗಿದ್ದು, ನಾಗರಿಕರು ಹಸಿವಿನಿಂದ ಮೃತಪಡುವ ಸಾಧ್ಯತೆಯ ಆತಂಕವನ್ನು ಕೂಡ ವಿಶ್ವಸಂಸ್ಥೆ ಹೊರಹಾಕಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಇಸ್ರೇಲ್ ಎರಡು ಮಾನವೀಯ ಮಾರ್ಗಗಳನ್ನು ತೆರೆಯಲು ಅವಕಾಶ ನೀಡಿದೆ. ಅಲ್ಲದೆ ಜೋರ್ಡಾನ್ ದೇಶದಿಂದ ಹೆಚ್ಚಿನ ಸಹಾಯವನ್ನು ಕೆರೆಮ್ ಶಾಲೋಮ್ ಕ್ರಾಸಿಂಗ್ ಮೂಲಕ ಪ್ರವೇಶಿಸಲು ಅನುಮತಿಸಲಾಗಿದೆ. ಗಾಜಾಗೆ ಆಹಾರ ಪೂರೈಸುತ್ತಿದ್ದ ವರ್ಲ್ಡ್ ಸೆಂಟ್ರಲ್ ಕಿಚನ್ (ಡಬ್ಲ್ಯುಸಿಕೆ)ನ ಏಳು ಸಿಬ್ಬಂದಿ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಬಳಿಕ ತನ್ನ ನೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.