ಗಾಂಧೀಜಿ ಪರ್ಯಾಯದ ಜತೆಗೆ ಅನಿವಾರ್ಯ

ತುಮಕೂರು, ನ. ೧೦- ಗಾಂಧಿ ಬರೀ ಪರ್ಯಾಯ ಮಾತ್ರವಲ್ಲ ಅನಿವಾರ್ಯ ಕೂಡ ಎಂದು ರಂಗಕರ್ಮಿ ಪ್ರಸನ್ನ ವಿಶ್ಲೇಷಿಸಿದರು.
ಇಲ್ಲಿನ ರವೀಂದ್ರ ಕಲಾನಿಕೇತನ ಕಲಾ ಶಾಲೆ ಆವರಣದಲ್ಲಿ ನಡೆದ ಕಾಯಕ ಜೀವಿಗಳಿಗೆ ಶರಣು ಜಾಥಾ ಹಾಗೂ ಒಳಿತು ಮಾಡು ಮನುಸಾ ಬೀದಿ ನಾಟಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ದೇಶದ ಬಡವರು, ಶ್ರಮಿಕರು, ಕಾರ್ಮಿಕರು ನೇಕಾರರು, ಕೃಷಿಕರು ಇಂದು ತುಂಬಾ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯನ್ನು ಎದುರಿಸಲು ಇಂದು ನಮಗೆ ಗಾಂಧಿ ಬರೀ ಪರ್ಯಾಯ ಮಾತ್ರವಲ್ಲ ಅನಿವಾರ್ಯವೂ ಕೂಡ ಆಗಿದ್ದಾರೆ ಎಂದು ಅವರು ಹೇಳಿದರು.
ಕಾಯಕ ಜೀವಿಗಳಿಗೆ ಶರಣು ಜಾಥಾ ಉದ್ದೇಶ ಕಾರ್ಮಿಕರು, ನೇಕಾರರು, ಬಡವರು, ಕೃಷಿಕರ ಸಂಕಷ್ಟಗಳನ್ನು ಸಮಾಜಕ್ಕೆ ಹಾಗೂ ಸರ್ಕಾರಕ್ಕೆ ತಿಳಿಸಿ ಕೊಡುವುದಾಗಿದೆ. ಕೊರೊನಾ ಕುರಿತ ಬೀದಿ ನಾಟಕದಲ್ಲಿ ಈ ಎಲ್ಲ ಸಮಸ್ಯೆಗಳ ಬಗ್ಗೆ ಸಮಾಜಕ್ಕೆ ತಿಳಿಸುವುದಾಗಿದೆ. ನಾವು ಇಂದು ಎಂತಹ ಆರ್ಥಿಕತೆಯನ್ನು ಬೆಂಬಲಿಸಬೇಕು ಅಂದರೆ ಪವಿತ್ರ ಆರ್ಥಿಕತೆಯನ್ನು ಬೆಂಬಲಿಸಬೇಕಿದೆ ಎಂದರು
ನಮ್ಮ ದೇಶದ ಎಲ್ಲಾ ಕಾರ್ಮಿಕರು ಹಳ್ಳಿಯ ಜನರು ಹಾಗೂ ರೈತರ ಮಕ್ಕಳೇ ಆಗಿದ್ದಾರೆ ಎಂಬುದು ನಮಗೆ ತಿಳಿಯಬೇಕಿದೆ. ನಮ್ಮ ದೇಶದಲ್ಲಿ ಗ್ರಾಮೋದ್ಯೋಗಿಗಳು, ಸಣ್ಣಕಾರ್ಮಿಕರು, ಕೃಷಿ ಉದ್ಯೋಗಿಗಳು ಇವರೆಲ್ಲರೂ ಸೇರಿದರೆ ೭೦ ಪ್ರತಿಶತ ಜನಸಂಖ್ಯೆ ಆಗುತ್ತದೆ ಎಂಬುದು ನಮ್ಮ ಗಮನದಲ್ಲಿರಬೇಕು. ಇವರೆಲ್ಲಾ ಸೇರಿ ಕಟ್ಟುವ ದೇಶ ತುಂಬಾ ಸುಸಜ್ಜಿತವಾಗಿ ಇರುತ್ತದೆ. ಇವರು ಕಟ್ಟುವ ದೇಶದಲ್ಲಿ ಪರಿಸರ ಮಾಲಿನ್ಯ ಇರುವುದಿಲ್ಲ. ಇವರು ಕಟ್ಟುವ ಆರ್ಥಿಕತೆಯಲ್ಲಿ ಅಂಬಾನಿಗೆ, ಅದಾನಿಗೆ ಬರುವಂತಹ ಲಾಭ ಬರುವುದಿಲ್ಲ. ಆದರೆ ಅದಕ್ಕೆ ಬದಲಾಗಿ ಅದಕ್ಕಿಂತ ಮಿಗಿಲಾಗಿ ಬಹುದೊಡ್ಡ ಸಾಮಾಜಿಕ ಲಾಭ ಸಿಗುತ್ತದೆ. ನಾವು ಬರೀ ಆರ್ಥಿಕ ಲಾಭದ ಹಿಂದೆ ಓಡುತ್ತಾ ಸಾಮಾಜಿಕ ಲಾಭವನ್ನು ಮರೆತು ಕೂತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೇರಳ ಸಾಹಿತ್ಯ ಪರಿಷತ್ತು ವಿಜ್ಞಾನವನ್ನು ಕಲಾ ಮಾಧ್ಯಮದ ಮೂಲಕ ಹರಡುವ ವಿನೂತನ ಪ್ರಯತ್ನಕ್ಕೆ ಕೂಡ ಸಮುದಾಯ ಸ್ಫೂರ್ತಿ ನೀಡಿತ್ತು. ಇಂದು ಶೇ. ೮೦ ರಷ್ಟು ಜನ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಕೊರೊನಾ ಎಂಬುದು ಎಲ್ಲರಲ್ಲೂ ಭಯವನ್ನು ಸೃಷ್ಠಿಸಿದೆ. ಲಾಕ್‌ಡೌನ್ ಘೋಷಣೆಯಾದಾಗ ಅಸಂಘಟಿತ ವಲಯದ ಕಾರ್ಮಿಕರು ಬೀದಿಗೆ ಬಿದ್ದರು, ಅವರ ಜೀವನೋಪಾಯಕ್ಕೆ ಕೂಡ ತುಂಬಾ ಹೊಡೆತ ಬಿದ್ದಿತು ಎಂದರು.
ಇಂತಹ ಅಮಾನವೀಯತೆಯ ಕ್ರೌರ್ಯದ ಸಂದರ್ಭದಲ್ಲಿ ಮೊಟ್ಟಮೊದಲ ಬಾರಿಗೆ ಸಮುದಾಯದ ಪರಂಪರೆಗೆ ಪೂರಕವಾಗಿ ಇಂತಹ ಸಮುದಾಯ ತಂಡ ಈ ರೀತಿಯ ಒಂದು ಕೆಚ್ಚೆದೆಯ ಕಾರ್ಯಕ್ಕೆ ಮುಂದಾಗಿರುವುದಕ್ಕೆ ನಾನು ಅಭಿನಂದಿಸುವೆ ಎಂದರು.
ವುಡೆ ಪಿ. ಕೃಷ್ಣ ಸಾಹಿತಿ ಕವಿತಾಕೃಷ್ಣ ತುಂಡೋಟಿ ನರಸಿಂಹಯ್ಯ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಸವಯ್ಯ ಮಾತನಾಡಿ, ಈ ಜಾಗೃತಿ ಕಾರ್ಯಕ್ರಮವು ನನಗೆ ಬಹಳ ಸಂತೋಷ ನೀಡಿದೆ. ಪ್ರಸ್ತುತ ಸಂದರ್ಭದಲ್ಲಿ ಈ ರೀತಿಯ ಕಾರ್ಯಕ್ರಮ ತುಂಬಾ ಅವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಶಶಿಧರ ಭಾರಿಘಾಟ್, ನಾಟಕ ನಿರ್ದೇಶಿಸಿದ ಮಾಲತೇಶ್, ಗ್ರಾಮ ಸೇವಾ ಸಂಘದ ಅಭಿಲಾಷ್, ಉಗಮ ಶ್ರೀನಿವಾಸ್, ಪಂಡಿತ್ ಜವಾಹರ್ ಮತ್ತಿತರರು ಉಪಸ್ಥಿತರಿದ್ದರು.