`ಗಾಂಧೀಜಿ-ನಜೀರ್‌ಸಾಬ್’ ಕಲ್ಪನೆಗೆ ಬೆಲೆ ಅಗತ್ಯ

ಪುತ್ತೂರು, ಜೂ.೨- ಗ್ರಾಮೀಣ ಪ್ರದೇಶದ ಬಡ ಜನರ ಅಭಿವೃದ್ಧಿ ಮತ್ತು ಆದಾಯ ವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿ ಉದ್ಯೋಗ ಖಾತ್ರಿ ಯೋಜನೆಯನ್ನು ರೂಪಿಸಲಾಗಿದ್ದು, ಈ ಯೋಜನೆಯನ್ನು ಯಶಸ್ವಿಗೊಳಿಸುವ ಮೂಲಕ ಮಹಾತ್ಮ ಗಾಂಧೀಜಿ ಮತ್ತು ಅಬ್ದುಲ್ ನಜೀರ್ ಸಾಬ್ ಅವರ ಕನಸು ಮತ್ತು ಕಲ್ಪನೆಗಳಿಗೆ ಬೆಲೆ ನೀಡಿ ಎಂದು ಶಾಸಕ ಸಂಜೀವ ಮಠಂದೂರು ಅವರು ಪಿಡಿಒಗಳಿಗೆ ಸೂಚನೆ ನೀಡಿದರು.

ಪುತ್ತೂರು ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಪ್ರತಿಯೊಂದು ಗ್ರಾಮ ಪಂಚಾಯತ್‌ವಾರು ಪ್ರಗತಿ ಪಡೆದುಕೊಂಡ ಶಾಸಕರು ಬಹುತೇಕ ಪಂಚಾಯತ್‌ಗಳಲ್ಲಿ ಯೋಜನೆ ಸಮರ್ಪಕವಾಗಿ ಕಾರ್ಯಗತಗೊಂಡಿಲ್ಲ. ಪಿಡಿಒಗಳು ಪಂಚಾಯತ್ ಕಚೇರಿಯಿಂದ ಹೊರಬಂದು ಕ್ಷೇತ್ರದಲ್ಲಿ ಕೆಲಸ ಮಾಡಿ. ನಮ್ಮಲ್ಲಿ ಬಹುತೇಕ ಕೃಷಿ ಪ್ರದೇಶವಾಗಿದ್ದು ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡಿ ಜನರಿಗೆ ಜಾಗೃತಿ ಮೂಡಿಸಲು ಮುಂದಾಗಿ. ಮನೆ ಮನೆ ಭೇಟಿ ಮಾಡಿ. ಉದ್ಯೋಗ ಖಾತ್ರಿ ಯೋಜನೆಯು ಯಶಸ್ವಿಯಾಗಬೇಕು ಎಂದರು.

ಪಿಡಿಓಗಳಿಗೆ ತರಾಟೆ

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರಗತಿಯಲ್ಲಿ ಪುತ್ತೂರು ಜಿಲ್ಲೆಯಲ್ಲಿಯೇ ಕಡಿಮೆ ಸಾಧನೆ ಮಾಡಿರುವ ಬಗ್ಗೆ ಪಿಡಿಒಗಳನ್ನು ತರಾಟೆಗೆತ್ತಿಕೊಂಡ ಶಾಸಕರು ಯೋಜನೆಯಲ್ಲಿ ಕೃಷಿ ಕಾರ್ಯಗಳಿಗೆ ಸಾಕಷ್ಟು ಅವಕಾಶಗಳಿದ್ದರೂ ಪಿಡಿಒಗಳು ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ತಾಲೂಕು ಹಿಂದುಳಿಯುವಂತಾಗಿದೆ. ಯೋಜನೆಯ ಅವಕಾಶ ಸೃಷ್ಠಿಸದೆ ಪಿಡಿಒಗಳು ಅನ್ನದಾತರಿಗೆ, ಕೃಷಿ ಕೂಲಿ ಕಾರ್ಮಿಕರಿಗೆ ಅನ್ಯಾಯ ಎಸಗುತ್ತಿದ್ದೀರಿ. ಪುತ್ತೂರು ತಾಲೂಕನ್ನು ತಲೆ ತಗ್ಗಿಸುವಂತೆ ಮಾಡುತ್ತಿದ್ದೀರಿ. ಲಾಕ್‌ಡೌನ್‌ನಿಂದಾಗಿ ಜನರು ಕೆಲಸವಿಲ್ಲದೆ ಮನೆಯೊಳಗೆ ಕುಳಿತುಕೊಳ್ಳುವ ಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಯೋಜನೆಯಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಶಾಸಕರು ಸೂಚಿಸಿದರು.

 ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಕಷ್ಟು ಅನುದಾನಗಳಿದ್ದರೂ ಪಿಡಿಒಗಳ ನಿಷ್ಕೀಯತೆಯಿಂದಾಗಿ ಅದು ಖರ್ಚಾಗುತ್ತಿಲ್ಲ. ಈಗಾಗಲೇ ಸರ್ಕಾರವು ೧೦೦ ಮಾನವ ದಿನಗಳನ್ನು ೧೫೦ ದಿನಗಳಿಗೆ ಏರಿಕೆ ಮಾಡಿದೆ. ಆದರೆ ಅವಕಾಶವಿದ್ದರೂ ಪ್ರಯೋಜನಕ್ಕೆ ಸಿಗದಂತೆ ಮಾಡುತ್ತೀರಿ. ಬಹುತೇಕ ಪಿಡಿಒಗಳು ಯುವಕರಿದ್ದೀರಿ. ನಿಮ್ಮ ಪಂಚಾಯತ್ ರೋಲ್ ಮಾಡೆಲ್ ಆಗುವಂತೆ ಮಾಡಿ. ಜನರು ನಿಮ್ಮನ್ನು ಗುರುತಿಸಬೇಕು ಎಂಬ ಚಿಂತನೆ ನಿಮ್ಮಲ್ಲಿ ಮೂಡಿ ಬರಬೇಕು. ಕೆಲಸವನ್ನು ಸವಾಲಾಗಿ ಸ್ವೀಕರಿಸಿ ಮುಂದುವರಿಯಬೇಕು ಎಂದು ಪಿಡಿಒಗಳಿಗೆ ಸಲಹೆ ನೀಡಿದರು.

ತಾಲೂಕುವಾರು ಮಾಹಿತಿ ನೀಡಿದ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಜಲಶಕ್ತಿ ಅಭಿಯಾನದಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗಿಲ್ಲ. ಪುತ್ತೂರಿಗೆ ಈ ಯೋಜನೆಯಲ್ಲಿ ಒಟ್ಟು ೨ ಲಕ್ಷದ ೬೧೨ ಮಾನವ ದಿನಗಳ ಗುರಿ ನೀಡಲಾಗಿತ್ತು. ಆದರೆ ಈ ಪೈಕಿ ೧೯೮೫೧ ಮಾನವ ದಿನಗಳ ಸಾಧನೆಯಾಗಿದ್ದು, ಒಟ್ಟು ಶೇ.೩೨ ರಷ್ಟು ಪ್ರಗತಿಯಾಗಿದೆ. ಪುತ್ತೂರು ತಾಲೂಕು ಜಿಲ್ಲೆಯಲ್ಲಿ ೫ನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.

ವೇದಿಕೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಒಂಬಡ್ಸೆಮೆನ್ ರಾಮದಾಸ್ ಗೌಡ, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕಿ ಶೈಲಜಾ ಭಟ್ ಮತ್ತು ಚೆನ್ನಪ್ಪ ಗೌಡ ಉಪಸ್ಥಿತರಿದ್ದರು.