ಗಾಂಧೀಜಿ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ಅಳವಡಿಸಲು ಶಿಕ್ಷಕರಿಂದ ಸಾಧ್ಯ

ಕೋಲಾರ,ಅ,೩:ಗಾಂಧೀಜಿ ರವರ ಸರಳ ಜೀವನ, ಅವರ ಹಾಕಿಕೊಂಡ ಜೀವನ ಶೈಲಿ, ಹೋರಾಟದ ವಿಧಾನ, ಕಷ್ಟದಲ್ಲಿನ ಸಮಾಜಕ್ಕೆ ನೆರವಾದ ರೀತಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದು ಇಂತಹ ಮಹಾನ್ ವ್ಯಕ್ತಿಯನ್ನು ಇಂದಿನ ಯುವಶಕ್ತಿ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸುವಲ್ಲಿ ಶಿಕ್ಷಕರ ಶ್ರಮ ಹಾಗೂ ಶಿಕ್ಷಕರು ಸದಾ ಓದುವ ಮತ್ತು ಜಾಗತಿಕ ವಿಷಯಗಳನ್ನು ಅರಿತು ತಮ್ಮ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ತಿಳಿಸುವುದರ ಮೂಲಕ ಸಮಾಜದ ಸುಧಾರಣೆ ಸಾಧ್ಯ ಎಂದು ಸಮಾಜ ಸೇವಕರಾದ ಸಿ.ಎಂ.ಆರ್.ಶ್ರೀನಾಥ್ ತಿಳಿಸಿದರು.
ಕೋಲಾರ ನಗರದ ಸ್ಕೌಟ್ ಭವನದಲ್ಲಿ ಸ್ಕೌಟ್ಸ್- ಗೈಡ್ಸ್ ಸಂಸ್ಥೆ, ರೋಟರಿ ಕೋಲಾರ ನಂದಿನಿ, ಸರ್ವೋದಯ ಮಂಡಲ ಕೋಲಾರ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಗಾಂಧೀ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರೀ ರವರ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲೆ ಮತ್ತು ಪ್ರಬಂಧ ಸ್ವರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.
ಜಯಂತಿಗಳನ್ನು ಕೇವಲ ಆಚರಣೆಗಾಗಿ ಮಾತ್ರ ಮೀಸಲಾಗಿಸದೇ ನಮ್ಮ ದೇಶದ ಮಹಾನ್ ನಾಯಕರ ತ್ಯಾಗ, ಸೇವೆ, ಅವರ ಜೀವನ ಶೈಲಿಗಳನ್ನು ಓದುವ ಮೂಲಕ ನಾವು ಅರ್ಥ ಮಾಡಿಕೊಂಡು ಅವರುಗಳ ಆದರ್ಶಗಳನ್ನು ನಮ್ಮ ಜೀವನದಲ್ಲಿ ರೂಡಿಸಿಕೊಂಡಾಗ ಮಾತ್ರ ಅರ್ಥ ಪೂರ್ಣವಾಗಲಿದೆ. ವಿದ್ಯಾರ್ಥಿಗಳು ಇತಿಹಾಸವನ್ನು ಮರೆಯಬಾರದು ಎಂದು ಹೇಳಿದರು.ಜಿಲ್ಲಾ ಮುಖ್ಯ ಆಯುಕ್ತ ಕೆ.ವಿ.ಶಂಕರಪ್ಪ ಮಾತನಾಡಿ ನಮ್ಮ ದೇಶ ಕಂಡ ಅಪ್ರತಿಮ ಸರಳ ವ್ಯಕ್ತಿಗಳು ಗಾಂಧೀಜಿ ಮತ್ತು ಶಾಸ್ತ್ರೀಜೀ ರವರುಗಳು, ಅವರುಗಳು ತಮ್ಮ ಸ್ವಂತ ಜೀವನವನ್ನು ದೇಶಕ್ಕಾಗಿ ಮುಡಪಾಗಿಟ್ಟು ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಂತಹವರ ಜನ್ಮದಿನವನ್ನು ಪ್ರತಿವರ್ಷ ಆಚರಣೆ ಮಾಡುತ್ತೇವೆ ಎಂದರು
ವಿದ್ಯಾರ್ಥಿಗಳು ಇಂದಿನ ಆಧುನಿಕ ಕಂಪ್ಯೂಟರ್ ಯುಗದಲ್ಲಿ ಮೊಬೈಲ್ ಗಳ ಮೂಲಕ ಅಥವಾ ಶಿಕ್ಷಕರ ಮೂಲಕ ಇಂತಹ ಮಹಾನ್ ವ್ಯಕ್ತಿಗಳ ಜೀವನದ ಸಂಗತಿಗಳನ್ನು ತಿಳಿದು ವರ್ಷಕ್ಕೆ ಒಂದು ಅಂಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ತಾವು ಸಹಾ ಉತ್ತಮ ನಾಗರೀಕರಾಗಿ ಬದಲಾದಾಗ ಮಾತ್ರ ಇಂತಹ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗುಬರಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು ಧರ್ಮಸ್ಥಳ ಸಂಘದ ಯೋಜನಾಧಿಕಾರಿಯಾರ ಸಿದ್ದಗಂಗಯ್ಯ ರವರು ಮಾತನಾಡಿ ಸ್ಕೌಟ್ಸ್ ಗೈಡ್ಸ್ ಗಳ ಸೇವಾ ಮನೋಭಾವ ಹಾಗೂ ತಾವು ಹಾಕಿಕೊಳ್ಳುವ ಯೋಜನೆಗಳು ಸಮಾಜಕ್ಕೆ ಮಾದರಿಯಾಗಿದ್ದು ಜಿಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಈ ಶಿಕ್ಷಣವನ್ನು ಪಡೆದು ಸ್ವಯಂಸೇವಕರಂತೆ ಬದಲಾಗಿ ಕಷ್ಟದಲ್ಲಿನ ಸಮಾಜಕ್ಕೆ ನೆರವಾಗಬೇಕೆಂದು ಕರೆ ನೀಡಿದರು.
ಆಯುಕ್ತರಾದ ಕೆ.ಆರ್. ಸುರೇಶ್, ಪದಾಧಿಕಾರಿಗಳಾದ ನಾರಾಯಣಸ್ವಾಮಿ, ಉಮಾದೇವಿ, ಸ್ಕೌಟ್ ಬಾಬು, ಮುನಿನಾರಾಯಣಪ್ಪ, ಗೌರಾಬಾಯಿ,ರಾಜಪ್ಪ, ರೆಡ್ಡೆಮ್ಮ, ಕೃಷ್ಣಮೂರ್ತಿ, ರವಿಕುಮಾರ್, ವಿಠಲ್ ರಾವ್, ವಿಶ್ವನಾಥ್, ಅರುಣಾ, ಶಿವಕುಮಾರ್, ವೆಂಕಟರಂಗಂ, ರಂಜನಿ, ಶಾಂತಕುಮಾರಿ ಮುಂತಾದವರು ಉಪಸ್ಥಿತರಿದ್ದರು.