ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಬಲಾಢ್ಯ ಭಾರತ ನಿರ್ಮಾಣಕ್ಕೆ ನಾಂದಿ

ತುಮಕೂರು, ಆ. ೩- ಮಹಾತ್ಮ ಗಾಂಧೀಜಿಯ ನಾಯಕತ್ವದಲ್ಲಿ ನಡೆದ ಅಸಹಕಾರ, ಅವಿಧೇಯತಾ, ಕ್ವಿಟ್ ಇಂಡಿಯಾ ಚಳವಳಿಗಳು ಬ್ರಿಟಿಷರನ್ನು ಭಾರತದಿಂದ ಹಿಂದಿರುಗುವಂತೆ ಮಾಡಿದವು. ಅವರು ಅವಿಧೇಯತಾ ಚಳವಳಿಯ ಅಂಗವಾಗಿ ಸಂಘಟಿಸಿದ ಉಪ್ಪಿನ ಸತ್ಯಾಗ್ರಹ ಇಡೀ ಹೋರಾಟಕ್ಕೆ ಹೊಸ ಸ್ಪಷ್ಟ ತಿರುವು ನೀಡಿತು. ಅಂದು ಉಪ್ಪು ಸ್ವಾಭಿಮಾನದ ಸ್ವಾತಂತ್ರ್ಯದ ಸಂಕೇತವಾಗಿ ಹೋರಾಟಗಾರರ ಕೈಗೆ ಹೊಸ ಶಸ್ತ್ರವನ್ನು ನೀಡಿತ್ತು ಎಂದ ಜಿಲ್ಲಾ ಕ.ಸಾ.ಪ. ಕಾರ್ಯದರ್ಶಿ, ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಹೇಳಿದರು.
ನಗರದ ಎಂಪ್ರೆಸ್ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕ.ಸಾ.ಪ. ಮತ್ತು ಜಿಲ್ಲಾ ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಏರ್ಪಡಿಸಿದ್ದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ೭೫ ಉಪನ್ಯಾಸಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಉಪ್ಪಿನ ಸತ್ಯಾಗ್ರಹ ಸಂಘಟಿಸುವುದಕ್ಕೆ ಮೊದಲು ತುಮಕೂರಿಗೆ ಆಗಮಿಸಿದ್ದ ಗಾಂಧೀಜಿ ಇಲ್ಲಿನ ಜನತೆಯನ್ನುದ್ದೇಶಿಸಿ ಚಳವಳಿಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದ್ದರು ಎಂದು ಸ್ಮರಿಸಿದ ಅವರು, ಇಡೀ ಭಾರತದ ಆರ್ಥಿಕ ಸಂಪತ್ತನ್ನು ಬ್ರಿಟಿಷರು ದೋಚಿಕೊಂಡು ಹೋಗಿ ೧೯೪೭ರಲ್ಲಿ ಬರಿದಾದ ಖಜಾನೆಯ ಭಾರತವನ್ನು ಕೊಟ್ಟರೂ ಈಗ ನಾವು ೭೫ ವರ್ಷಗಳ ಅವಧಿಯಲ್ಲಿ ಆರ್ಥಿಕವಾಗಿ ಸದೃಢ, ಬಲಾಢ್ಯ ಸಾಂಸ್ಕೃತಿಕ ಭಾರತವನ್ನು ಕಟ್ಟಿರುವುದು ಹೆಮ್ಮೆಯ ವಿಷಯ ಎಂದರು.
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಗಾಂಧೀಜಿ ನಾಯಕತ್ವದಲ್ಲಿ ಅಹಿಂಸಾತ್ಮಕ ಚಳವಳಿ ನಡೆಯುತ್ತಿದ್ದರೆ ಅದನ್ನು ಒಪ್ಪದ ಭಗತ್‌ಸಿಂಗ್, ರಾಜಗುರು ಸುಖದೇವ್, ಸುಭಾಷ್ ಚಂದ್ರಬೋಸ್‌ರಂತಹ ನಾಯಕರು ತಮ್ಮದೇ ಆದ ವಿಧಾನದಲ್ಲಿ ಹೋರಾಡಿದ್ದರೂ ಅವರಿಗೆ ಚರಿತ್ರೆಯಲ್ಲಿ ಸರಿಯಾದ ಸ್ಥಾನ ಸಿಗದೆ ಇರುವುದು ಅತ್ಯಂತ ವಿಷಾದನೀಯ ಸಂಗತಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಂಜಯ್ಯ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ಹಿರಿಯರ ತ್ಯಾಗ ಬಲಿದಾನಗಳನ್ನು ಸ್ಮರಿಸಬೇಕಾಗಿರುವುದು ಅತ್ಯವಶ್ಯ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾಲದಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಎಲ್ಲರೂ ಸಾಕ್ಷರರಾಗಿದ್ದಾರೆ. ಶಾಲಾ-ಕಾಲೇಜುಗಳು ವಿದ್ಯಾರ್ಥಿ ಸಮುದಾಯದಲ್ಲಿ ರಾಷ್ಟ್ರಭಕ್ತಿಯನ್ನು ಪ್ರೇರೇಪಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಶಿಕ್ಷಕರಿಗೆ ಕರೆ ನೀಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಸಾಹಿತ್ಯ ಪರಿಷತ್ ಎಲ್ಲ ಶಿಕ್ಷಕ ಮತ್ತು ಕನ್ನಡ ಪರ ಸಂಘಟನೆಗಳ ಜತೆಗೂಡಿ ಆಗಸ್ಟ್ ತಿಂಗಳೊಂದರಲ್ಲೇ ಜಿಲ್ಲಾದ್ಯಂತ ಇಂಡಿಯಾದಿಂದ ಭಾರತದೆಡೆಗೆ ವಿಷಯ ಕುರಿತ ೭೫ ಉಪನ್ಯಾಸಗಳನ್ನು ಏರ್ಪಡಿಸಲಾಗುವುದು. ಇದರ ಜತೆಗೆ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸ್ವಾತಂತ್ರ್ಯ ಮತ್ತು ದೇಶಭಕ್ತಿಗೆ ಸಂಬಂಧಿಸಿದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಅಮೃತ ಮಹೋತ್ಸವವನ್ನು ಧಾರ್ಮಿಕ ಹಬ್ಬ ಆಚರಿಸುವಂತೆ ಪ್ರತಿ ಕುಟುಂಬವೂ ಆಚರಿಸಿ ಸ್ವಾತಂತ್ರ್ಯದ ಸವಿಯನ್ನು ಸಾರ್ವಜನಿಕರು ಅನುಭವಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಪ್ರೆಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಷಣ್ಮುಖಪ್ಪ ವಹಿಸಿದ್ದರು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಸಣ್ಣಮಸಿಯಪ್ಪ, ಆಶಾ ಪ್ರಸನ್ನಕುಮಾರ್, ಸುಭಾಷಿಣಿ ಮತ್ತಿತರರು ಉಪಸ್ಥಿತರಿದ್ದರು.