ಗಾಂಧೀಜಿ ಅಹಿಂಸಾತ್ಮಕ ಹೋರಾಟ ಮಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು: ಡಾ.ಗಾಂಧೀಜಿ ಮೋಳಕೆರೆ

ಕಲಬುರಗಿ,ಜ.31-ಮಹಾತ್ಮಾ ಗಾಂಧೀಜಿಯವರು ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಹೋರಾಟ ಮಾಡಿ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು ಎಂದು ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಇತಿಹಾಸ ಉಪನ್ಯಾಸಕ ಡಾ.ಗಾಂಧೀಜಿ ಮೋಳಕೆರೆ ಹೇಳಿದರು.
ನಗರದ ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದದಲ್ಲಿ ಮಹಾತ್ಮ ಗಾಂಧೀಜಿಯವರ 76ನೇ ಪುಣ್ಯ ಸ್ಮರಣಿಯ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
1920ರಲ್ಲಿ ಗಾಂಧೀಜಿಯವರ ನಾಯಕತ್ವದಲ್ಲಿ ನಡೆದ ಅಸಹಕಾರ ಚಳುವಳಿ ಭಾರತದ ರಾಷ್ಟ್ರೀಯ ಚಳುವಳಿಯ ಇತಿಹಾಸದಲ್ಲಿ ಒಂದು ಮೈಲುಗಲು.್ಲ ಈ ಚಳುವಳಿ ರಾಷ್ಟ್ರವ್ಯಾಪಿ ಜನಂದೋಲನವಾಗಿತ್ತು. ಗಾಂಧೀಜಿ ಅವರು ಹಿಂದು-ಮುಸ್ಲಿಮರನ್ನು ಒಂದುಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಲು 1924ರ ಬೆಳಗಾವಿಯಲ್ಲಿ ನಡೆದ ಐತಿಹಾಸಿಕ ಕಾಂಗ್ರೆಸ್ ಸಮ್ಮೇಳನದ ಅಧ್ಯಕ್ಷರಾಗಿ ಸ್ವಾತಂತ್ರ್ಯ ಚಳುವಳಿಗೆ ಹೊಸ ಹುಮ್ಮಸ್ಸನ್ನು ನೀಡಿದರು. 1942ರ ಮಾಡು ಇಲ್ಲವೇ ಮಡಿ ಚಳುವಳಿಯ ಮೂಲಕ ಬ್ರಿಟಿಷರಿಗೆ ಗಾಂಧೀಜಿಯವರು ಸಿಂಹ ಸ್ವಪ್ನವಾಗಿದ್ದರು. ಕ್ವಿಟ್ ಇಂಡಿಯಾ ಮೂಮೆಂಟ್ ಮೂಲಕ ದೇಶದಲ್ಲಿ ಚಳುವಳಿ ತೀವ್ರಗೊಂಡು ಮುಂದೆ 1947 ಆಗಸ್ಟ್ 15 ರಂದು ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಹೀಗೆ ಗಾಂಧೀಜಿಯವರ ವಿಚಾರಗಳು ಚಿಂತನೆಗಳು ಅವರ ಸತ್ಯ ಮತ್ತು ಅಹಿಂಸಾ ಮಾರ್ಗಗಳು ಇವತ್ತಿಗೂ ಜೀವಂತವಾಗಿವೆ. ಅವುಗಳನ್ನು ಅನುಸರಿಸುವುದರ ಮೂಲಕ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ.ನಿರ್ಮಲ ಸಿರಗಾಪುರವರು ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎನ್‍ಎಸ್‍ಎಸ್ ಅಧಿಕಾರಿ ಸಿದ್ದಪ್ಪ ಎಂ.ಕಾಂತ ಅವರು ಮಾತನಾಡುತ್ತ, ಬಸವಣ್ಣನವರ ವಚನಗಳನ್ನು ಹೇಳುವುದರ ಮೂಲಕ ಗಾಂಧೀಜಿಯವರ ಚಿಂತನೆಗಳನ್ನು ಮಕ್ಕಳಿಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಂಥಪಾಲಕ ರಮೇಶ್ ಜಾಬ್ನೂರ್, ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ.ಸುದರ್ಶನ್ ಮದನ್ಕರ್ ಉಪಸ್ಥಿತರಿದ್ದರು. ಡಾ ಹರ್ಷವರ್ಧನ್ ಬಿ. ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು. ಪಂಡಿತ್ ಬಿ.ಕೆ. ನಿರೂಪಿಸಿ ವಂದಿಸಿದರು.