ಗಾಂಧಿ ಭವನ ಕಾಮಗಾರಿಗೆ ಸಚಿವನಾಗೇಶ್ ಚಾಲನೆ

ಕೋಲಾರ,ಜ.೯:ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಿರ್ಮಿಸಲಾಗುತ್ತಿರುವ ಸುಸಜ್ಜಿತ ಗಾಂಧಿ ಭವನ ಕಾಮಗಾರಿಗೆ ಇಂದು ಮಾನ್ಯ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಕೋಲಾರ ತಾಲ್ಲೂಕು ಕಸಬಾ ಹೋಬಳಿಯ ಗಾಂಧಿ ನಗರದ ಮಣಿಘಟ್ಟ ರಸ್ತೆಯಲ್ಲಿ ಇರುವ ೩೦ ಗುಂಟೆ ನಿವೇಶನದಲ್ಲಿ ೨ ಕೋಟಿ ರೂ.ಗಳ ಕಟ್ಟಡ ಕಾಮಗಾರಿ ಹಾಗೂ ೧ಕೋಟಿ ರೂಗಳಲ್ಲಿ ಕಾಂಪೌಂಡ್ ಹಾಗೂ ಹೊರಾಂಗಣ ವಿನ್ಯಾಸ ಕಾಮಗಾರಿಯನ್ನು ಜಿಲ್ಲಾ ನಿರ್ಮಿತಿ ಕೇಂದ್ರದ ವತಿಯಿಂದ ಅನುಷ್ಟಾಗೊಳಿಸಲು ಕ್ರಮ ವಹಿಸಲಾಗಿದೆ. ಈ ಸಂಪೂರ್ಣ ಕಾಮಗಾರಿಯನ್ನು ಜಿಲ್ಲಾಡಳಿತ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮಾರ್ಗದರ್ಶನದಂತೆ ಇನ್ನು ೧೦ ತಿಂಗಳೊಳಗಾಗಿ ಪೂರ್ಣಗೊಳಿಸಲಾಗುವುದು.
ಜಿಲ್ಲೆಯ ಜನತೆಗೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ವಿಚಾರಧಾರೆಗಳನ್ನು ಪರಿಚಯಿಸುವ ಸಲುವಾಗಿ ಸಾಬರಮತಿ ಆಶ್ರಮದ ಕುಟೀರ ಮಾದರಿಯಲ್ಲಿ ನಿರ್ಮಿಸಲಾಗುವ ಗಾಂಧಿಭವನ ಕಟ್ಟಡವು, ವಸ್ತು ಸಂಗ್ರಹಾಲಯ, ವಿವಿದ್ದೋದೇಶ ಸಭಾಂಗಣ, ಗ್ರಂಥಾಲಯ, ತರಬೇತಿ ಕೇಂದ್ರ ಸೇರಿದಂತೆ ಮಹಾತ್ಮರನ್ನು ಪರಿಚಯಿಸುವ ಚಿತ್ರಕಲಾ ಗ್ಯಾಲರಿಗಳನ್ನು ಹೊಂದಲಿದೆ.
ನಗರದ ಕೇಂದ್ರ ಭಾಗದಲ್ಲೇ ಭವನ ನಿರ್ಮಾಣಗೊಳ್ಳಲಿದ್ದು, ಜಿಲ್ಲೆಯ ವಿದ್ಯಾರ್ಥಿಗಳು, ಮಕ್ಕಳು, ಗಾಂಧಿ ಅಧ್ಯಯನ ಆಸಕ್ತರು ಸೇರಿದಂತೆ ಸಾರ್ವಜನಿಕರಿಗೆ ಗಾಂಧಿಯನ್ನು ಹತ್ತಿರದಿಂದ ಪರಿಚಯಿಸುವ ಪ್ರಯತ್ನವಾಗಿ ಪರಿಣಮಿಸಲಿದೆ ಎಂದು ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಲಾರ ಶಾಸಕರಾದ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಜಿ. ಪಂ ಅಧ್ಯಕ್ಷರಾದ ಸಿ.ಎಸ್.ವೆಂಕಟೇಶ್, ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವಿ.ಮುನಿರಾಜು, ಉಪ ವಿಭಾಗಾಧಿಕಾರಿಗಳಾದ ಸೋಮಶೇಖರ್, ತಹಶೀಲ್ದಾರ್ ಶೋಭಿತಾ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾದ ನಾರಾಯಣಗೌಡ ಉಪಸ್ಥಿತರಿದ್ದರು.