ಗಾಂಧಿ ಕುಟುಂಬಕ್ಕೆ ಬಿಜೆಪಿ ಕಿರುಕುಳ ಡಿಕೆಶಿ ಟೀಕೆ


ಬೆಂಗಳೂರು, ಜು. ೨೧- ಗಾಂಧಿ ಪರಿವಾರದ ಮೇಲೆ ಅನಗತ್ಯವಾಗಿ ಪ್ರಕರಣವನ್ನು ದಾಖಲಿಸಿ ಕೇಂದ್ರ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದಲ್ಲಿಂದು ಬೆಳಿಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣ ಮುಗಿದ ಪ್ರಕರಣವಾಗಿತ್ತು. ಈ ಪ್ರಕರಣದಲ್ಲಿ ಏನೂ ಇಲ್ಲ ಎಂದು ಈ ಹಿಂದೆಯೇ ಕೇಂದ್ರ ಸಚಿವ ದಿ. ಅರುಣ್ ಜೇಟ್ಲಿ ಹೇಳಿದ್ದರು. ಆದರೂ ಅನಗತ್ಯವಾಗಿ ಕೇಂದ್ರದ ಬಿಜೆಪಿ ಸರ್ಕಾರ ಪ್ರಕರಣ ದಾಖಲಿಸಿದೆ ಎಂದು ದೂರಿದರು.
ನಾವು ತನಿಖೆಗೆ ಹೆದರುವುದಿಲ್ಲ. ಆದರೆ ಅನಗತ್ಯವಾಗಿ ಕಿರುಕುಳ ನೀಡುವುದು ಸರಿಯಲ್ಲ. ಪ್ರಾಥಮಿಕ ತನಿಖೆಯಲ್ಲಿ ತಪ್ಪು ಕಂಡು ಬಂದಿದೆಯೇ ಎಂದು ಪ್ರಶ್ನಿಸಿದರು.
ಕೇಂದ್ರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಲಿದೆ. ಯಾವುದಕ್ಕೂ ಹೆದರುವುದಿಲ್ಲ. ರಾಹುಲ್‌ಗಾಂಧಿಯವರನ್ನು ೫೦ ಗಂಟೆ ವಿಚಾರಣೆ ಮಾಡಿದರು, ಏನಾಯಿತು ಎಂದು ಅವರು ಪ್ರಶ್ನಿಸಿದರು.
ಕೇಂದ್ರದ ಸುಳ್ಳು ಪ್ರಕರಣಗಳ ದಾಖಲು ಹಾಗೂ ಕಿರುಕುಳದ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ. ನಾವು ಯಾವುದಕ್ಕೂ ಹೆದರಲ್ಲ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.