ಗಾಂಧಿನಗರ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಬಿರುಸಿನ ಪ್ರಚಾರ

ಬೆಂಗಳೂರು,ಏ,೩೦:ಗಾಂಧಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಅವರು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದು ಇಂದು ರಾಜ್ಯಸಭಾ ಸದಸ್ಯ ಲೆಹರ್‌ಸಿಂಗ್, ಗುಜರಾತ್‌ನ ಲೋಕಸಭಾ ಸದಸ್ಯ ಸುನಿಲ್‌ಸಿಂಘ್ವಿ ಇವರುಗಳು ಸಪ್ತಗಿರಿ ಗೌಡ ಅವರ ಪರವಾಗಿ ಕ್ಷೇತ್ರದಲ್ಲಿ ಮತಯಾಚನೆ ಮಾಡಿದರು.
ಕ್ಷೇತ್ರದ ಕಾಟನ್‌ಪೇಟೆ ಸೇರಿದಂತೆ ವಿವಿಧೆಡೆ ಇರುವ ಅಪಾರ್ಟ್‌ಮೆಂಟ್‌ಗಳಿಗೆ ಇಂದು ಬೆಳಿಗ್ಗೆಯೇ ತೆರಳಿದ ಇವರುಗಳು ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಭೇಟಿ ಮಾಡಿ ಬಿಜೆಪಿಗೆ ಮತ ನೀಡಿ ಸಪ್ತಗಿರಿಗೌಡ ಅವರನ್ನು ಗೆಲ್ಲಿಸುವಂತೆ ಕೋರಿದರು.
ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿಯೇ ಆಶಾಕಿರಣ, ಅಭಿವೃದ್ಧಿಗಾಗಿ ಬಿಜೆಪಿಯನ್ನು ಗೆಲ್ಲಿಸಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ ಎಂದು ಇವರುಗಳು ಮನವಿ ಮಾಡಿದರು.
ಮತಪ್ರಚಾರ ಸಂದರ್ಭದಲ್ಲಿ ಅಪಾರ್ಟ್‌ಮೆಂಟ್ ನಿವಾಸಿಗಳು ಕೆಲ ಸಮಸ್ಯೆಗಳನ್ನು ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಅವರ ಗಮನಕ್ಕೆ ತಂದಿದ್ದು, ಸಪ್ತಗಿರಿಗೌಡ ಅವರು ನನ್ನನ್ನು ಗೆಲ್ಲಿಸಿ ಈ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತೇನೆ ಎಂಬ ಭರವಸೆಯನ್ನೂ ನೀಡಿದರು. ಕೆಲವರು ಸಂಚಾರ ದಟ್ಟಣೆಯ ಬಗ್ಗೆಯೂ ಅಹವಾಲು ಹೇಳಿಕೊಂಡಿದ್ದು, ಇದಕ್ಕೆ ಸ್ಪಂದಿಸಿದ ಸಪ್ತಗಿರಿಗೌಡ ಅವರು ತಾವು ಗೆದ್ದು ಬಂದರೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಯನ್ನು ಸಾಕಾರಗೊಳಿಸುವುದಾಗಿ ಹೇಳಿದರು.
ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೆ ವಿಶೇಷ ಗಮನ, ಅನುದಾನ ನೀಡಿದೆ. ನೀವು ನನ್ನನ್ನು ಗೆಲ್ಲಿಸಿದರೆ ಈ ಅನುದಾನವನ್ನು ಸದ್ಬಳಕೆ ಮಾಡಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಸಪ್ತಗಿರಿಗೌಡ ಭರವಸೆ ನೀಡಿದರು.