
ಕೆಂಗೇರಿ,ಆ.೪- ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಸಾಮಾಜಿಕ ಜವಾಬ್ದಾರಿ ಮೂಲಕ ಭಾರತದ ಉತ್ತಮ ಪ್ರಜೆಯಾಗಿ ನಮ್ಮ ಕರ್ತವ್ಯವನ್ನು ನಿಭಾಯಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂದೀಪ್ ಸಾಲಿಯಾನ್ ತಿಳಿಸಿದರು. ವಳಗೇರಹಳ್ಳಿ ನಿವಾಸಿಗಳ ಒಕ್ಕೂಟದ ವತಿಯಿಂದ ವಳಗೇರಹಳ್ಳಿ ಗಾಂಧಿನಗರ ಕೆರೆಯು ಕಲುಷಿತಗೊಂಡು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ ಹಿನ್ನೆಲೆ ದೂರಿಗೆ ಸ್ಪಂದಿಸಿ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಸುಶಿಕ್ಷಿತರೆ ಇಂದು ಸಾಮಾಜಿಕ ಜವಾಬ್ದಾರಿಯನ್ನು ಮರೆತು ಎಲ್ಲೆಂದರಲ್ಲಿ ಕಸವನ್ನು ಎಸೆಯುವ ಮೂಲಕ ಪರಿಸರ ಮಾಲಿನ್ಯಕ್ಕೆ ಕಾರಣರಾಗುತ್ತಿರುವುದು ವಿಷಾದದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.ಪರಿಸರ ಮಾಲಿನ್ಯದಿಂದ ಮುಕ್ತಿಗೊಳಿಸಲು ಎಲ್ಲರೂ ಕಂಕಣಬದ್ಧರಾಗಿ ಕಾರ್ಯ ನಿರ್ವಹಿಸುವ ಮೂಲಕ ಮುಂದಿನ ಪೀಳಿಗೆಗೂ ಉತ್ತಮ ಪರಿಸರ ನೀಡುವ ಜವಾಬ್ದಾರಿಯನ್ನು ವಹಿಸಬೇಕೆಂದರು. ನಮ್ಮ ಪೂರ್ವಜರು ನೀಡಿ ಹೋದ ಪರಿಸರ ಸಂರಕ್ಷಣೆಯ ಜವಾಬ್ದಾರಿಯನ್ನು ನಿರ್ಲಕ್ಷಿಸಿದ ಪರಿಣಾಮದಿಂದಾಗಿ ಹವಾಮಾನ ವೈಪರಿತ್ಯದಂತಹ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದರು.
ಬಾಲ್ಯದಲ್ಲಿಯೇ ಮಕ್ಕಳಿಗೆ ಪರಿಸರ ಸಂರಕ್ಷಣೆಯಂತಹ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಅಗತ್ಯತೆ ಇದೆ ಎಂದು ತಿಳಿಸಿದರು ಕೆರೆಯ ಅಂಗಳದಲ್ಲಿ ಅವೈಜ್ಞಾನಿಕವಾಗಿ ಒಳಚರಂಡಿ ಪೈಪ್ ಲೈನ್ ಅಳವಡಿಸುವ ಮೂಲಕ ಅಧಿಕಾರಿಗಳು ನಿರ್ಲಕ್ಷ ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು. ಕೆರೆ ಕಟ್ಟೆಗಳ ಸಂರಕ್ಷಿಸುವ ಮೂಲಕ ಪರಿಸರ ಮಾಲಿನ್ಯವನ್ನು ತಡೆಗಟ್ಟಿ ಉತ್ತಮ ಪರಿಸರ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮದಾಗ ಬೇಕಾಗಿದೆ ಎಂದರು.
ಕೆರೆ ಅಭಿವೃದ್ಧಿ ಪ್ರಾಧಿಕಾರದ ಇಲಾಖೆಗೆ ಸಂಬಂಧಪಟ್ಟ ಎಲ್ಲ ಹಿರಿಯ ಅಧಿಕಾರಿಗಳು ಕೆರೆ ಪರಿಶೀಲನೆ ವೇಳೆ ಗೈರು ಹಾಜರಾಗಿ ನಿರ್ಲಕ್ಯ ವಹಿಸಿರುವುದು ಸರ್ಕಾರಿ ಅಧಿಕಾರಿಗಳ ಬೇಜಾವಾಬ್ದಾರಿ ಎದ್ದು ಕಾಣುತ್ತಿತ್ತು. ಆರೆಕಾಲಿಕ ಸ್ವಯಂ ಸೇವಕರು ಅಭಿಜಿತ್,ಜಿಲ್ಲಾ ಸರ್ಕಾರಿ ವಕೀಲ ಎಸ್.ಎಚ್.ಕೃಷ್ಣರೆಡ್ಡಿ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಹಿರಾಲಾಲ್ ನಾಯಕ್, ವಳಗೇರಹಳ್ಳಿ ನಿವಾಸಿಗಳ ಒಕ್ಕೂಟದ ಅದ್ಯಕ್ಷ ಎನ್.ಕದರಪ್ಪ, ಕಾರ್ಯದರ್ಶಿ ವಿನಯ್ ಹೆಗಡೆ,ಜ್ಞಾನಭಾರತಿ ೨ ನೇ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷ ನಾಗರಾಜು,ವಿಶ್ವೇಶ್ವರಯ್ಯ ಬಡಾವಣೆಯ೧ ನೇ ಬ್ಲಾಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷ ರಮೇಶ್,ಕಾರ್ಯದರ್ಶಿ ಶ್ರೀಕಂಠಮೂರ್ತಿ,ಐ.ರವೀಂದ್ರನಾಥ್,ಸುಕನ್ಯಾ ಹೆಗಡೆ,ರೂಪಶ್ರೀ, ಶಿವಣ್ಣ,ಎಂ.ಟಿಎಸ್.ಬಡಾವಣೆಯ ಕಾರ್ಯದರ್ಶಿ ಜಗದೀಶ್ ಮತ್ತಿತರರು ಇದ್ದರು.