ಗಾಂಧಿಗಂಜ್ ನ ಮುಖ್ಯ ರಸ್ತೆಗಳಿಗೆ ಫುಟ್ ಪಾತ್ ಗಳೇ ಇಲ್ಲ

ಬೀದರ:ಜ.11: ರಾಜ್ಯದ ಮುಕುಟ ಮಣಿಯಂತಿರುವ ಬೀದರ್‌ ಜಿಲ್ಲೆ ಮೂಲಸೌಕರ್ಯದ ವಿಷಯದಲ್ಲಿ ಇಂದಿಗೂ ಹಿಂದುಳಿದಿದೆ. ಜಿಲ್ಲೆಯ ಪುರಾತನ ನಗರ, ಪಟ್ಟಣಗಳಲ್ಲಿ ಅಲ್ಲೊಂದು ಇಲ್ಲೊಂದು ರಸ್ತೆಯ ಬದಿಗೆ ಮಾತ್ರ ನಿರ್ಮಿಸಿರುವ ಪಾದಚಾರಿ ಮಾರ್ಗಗಳಿಂದ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿಲ್ಲ. ಎಲ್ಲೆಡೆ ವ್ಯಾಪಾರಿಗಳೇ ಪಾದಚಾರಿ ರಸ್ತೆಗಳನ್ನು ಅತಿಕ್ರಮಿಸಿಕೊಂಡಿದ್ದಾರೆ.

ಕೆಲ ಮುಖ್ಯ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲ. ರಸ್ತೆ ಬದಿಗೆ ದ್ವಿಚಕ್ರ ವಾಹನ, ಕಾರು, ಜೀಪ್‌ಗಳನ್ನು ನಿಲುಗಡೆ ಮಾಡುವುದರಿಂದ ಜನ ರಸ್ತೆ ಮಧ್ಯೆಯೇ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇದೆ. ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾದಚಾರಿಗಳ ಹಿತರಕ್ಷಣೆಗೆ ಆದ್ಯತೆ ನೀಡಿಲ್ಲ. ಪಾದಚಾರಿ ಮಾರ್ಗಗಳು ಹೆಚ್ಚಿಲ್ಲ. ಆದರೆ, ಇರುವ ಕಡೆ ಕಡೆ ಪಾದಚಾರಿಗಳಿಗೆ ಸುರಕ್ಷತೆ ಇಲ್ಲ
.ಜಿಲ್ಲೆಯ ಯಾವುದೇ ನಗರ, ಪಟ್ಟಣಗಳಿಗೆ ಭೇಟಿಕೊಟ್ಟರೂ ಜನ ಇಂದಿಗೂ ಜಿಲ್ಲಾಧಿಕಾರಿಯಾಗಿದ್ದ ಹರ್ಷ ಗುಪ್ತಾ ಅವರನ್ನೇ ಸ್ಮರಿಸುತ್ತಾರೆ. ಅವರ ಅವಧಿಯಲ್ಲಿ ಮಾಸ್ಟರ್‌ ಪ್ಲ್ಯಾನ್‌ ಮಾಡಿದ ಓಲ್ಡ್‌ಸಿಟಿಯಲ್ಲಿ ಮಾತ್ರ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿದೆ. ಇದನ್ನು ಬಿಟ್ಟರೆ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳನ್ನೇ ನಿರ್ಮಿಸಲಾಗಿಲ್ಲ.
ಬೀದರ್‌ನ ಓಲ್ಡ್‌ ಸಿಟಿಯಲ್ಲಿ ಪಾದಚಾರಿ ಮಾರ್ಗ ಇದ್ದರೂ ರಸ್ತೆ ಬದಿ ಕೆಲ ಅಂಗಡಿಯವರು ಅತಿಕ್ರಮಿಸಿದ್ದಾರೆ. ಪಾದಚಾರಿ ಮಾರ್ಗಗಳ ಮೇಲೆಯೇ ವಸ್ತುಗಳನ್ನು ಇಟ್ಟು ಮಾರಾಟ ಮಾಡುತ್ತಿದ್ದಾರೆ. ಸಂಚಾರ ದಟ್ಟಣೆ ಇರುವ ಕೆಲ ರಸ್ತೆಗಳಲ್ಲಿ ಪಾದಚಾರಿಗಳು ರಸ್ತೆ ಮಧ್ಯೆ ನಡೆದುಕೊಂಡು ಹೋಗಬೇಕಾದ ಸ್ಥಿತಿ ಇದೆ.

ಶಿವನಗರ, ಕೇಂದ್ರ ಬಸ್‌ ನಿಲ್ದಾಣದ ಮುಂಭಾಗದ ಉದಗಿರ ರಸ್ತೆಯ ಎರಡೂ ಬದಿಗೂ ದೊಡ್ಡ ಮಾಲ್‌ಗಳು, ಹೋಟೆಲ್‌ಗಳು, ರೆಸ್ಟೋರೆಂಟ್, ಎಲೆಕ್ಟ್ರಾನಿಕ್ ಶೋರೂಂ ಹಾಗೂ ಬಟ್ಟೆ ಅಂಗಡಿಗಳು ಇವೆ. ಆಶ್ಚರ್ಯ ಅಂದರೆ ಇಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲ.

ಜನರಲ್‌ ಕಾರ್ಯಪ್ಪ ವೃತ್ತದಿಂದ ಅಂಬೇಡ್ಕರ್‌ ವೃತ್ತ, ಭಗತ್‌ಸಿಂಗ್‌ ವೃತ್ತದಿಂದ ಬಸವೇಶ್ವರ ವೃತ್ತದ ವರೆಗಿನ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಂಬೇಡ್ಕರ್‌ ವೃತ್ತದಿಂದ ಸಿದ್ಧಾರ್ಥ ಕಾಲೇಜಿನವರೆಗೂ ಅನೇಕ ವಾಣಿಜ್ಯ ಮಳಿಗೆಗಳು, ಶಾಲಾ ಕಾಲೇಜುಗಳು ಇವೆ. ಇದು ಜನದಟ್ಟಣೆ ಪ್ರದೇಶವಾಗಿದ್ದರೂ ಜಿಲ್ಲಾಡಳಿತವು ಪಾದಚಾರಿ ಮಾರ್ಗ ನಿರ್ಮಿಸಿಲ್ಲ.

ಬೊಮ್ಮಗೊಂಡೇಶ್ವರ ವೃತ್ತದಿಂದ ಚಿದ್ರಿ ವರೆಗೆ ಪಾದಚಾರಿ ರಸ್ತೆ ಇಲ್ಲ. ಗಾಂಧಿಗಂಜ್‌ ವರೆಗೆ ಸ್ವಲ್ಪ ಮಟ್ಟಿಗೆ ಪಾದಚಾರಿ ರಸ್ತೆ ನಿರ್ಮಾಣಗೊಂಡರೂ ವ್ಯಾಪಾರಸ್ಥರು ಅದನ್ನು ಅತಿಕ್ರಮಿಸಿದ್ದಾರೆ. ಅನೇಕ ಜನ ಇದೇ ಮಾರ್ಗವಾಗಿ ವಿಮಾನ ನಿಲ್ದಾಣ, ಪಶು ವೈದ್ಯಕೀಯ ವಿಶ್ವವಿದ್ಯಾಲಯ, ಕೇಂದ್ರೀಯ ವಿದ್ಯಾಲಯ, ವಾಯಪಡೆ ಸಿಬ್ಬಂದಿ ವಸತಿ ಗೃಹಗಳಿಗೆ ಹೋಗುತ್ತಾರೆ. ಆದರೂ ನಗರಸಭೆಯು ಪಾದಚಾರಿ ಮಾರ್ಗವನ್ನೇ ನಿರ್ಮಿಸಿಲ್ಲ.

ಪಾದಚಾರಿಗಳಿಗೆ ಮಾರ್ಗ ನಿರ್ಮಿಸಿಕೊಡುವ ಯೋಜನೆ ಮಣ್ಣುಪಾಲಾಗಿದೆ. ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಯೋಜನೆ ರೂಪಿಸುವಲ್ಲಿ ವಿಫಲವಾಗಿದ್ದಾರೆ. ಪಾದಚಾರಿ ಮಾರ್ಗವಿಲ್ಲದ ರಸ್ತೆಗಳು ಸರಗಳ್ಳರಿಗೆ ಅನುಕೂಲಕರವಾಗಿ ಪರಿಣಮಿಸಿವೆ. ಹಿಂದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಅವರು ರಸ್ತೆ ಸುರಕ್ಷತಾ ಸಭೆಯಲ್ಲಿ ಪಾದಚಾರಿ ರಸ್ತೆ ನಿರ್ಮಿಸುವ ಕುರಿತು ಪ್ರಸ್ತಾಪ ಮಾಡಿದ್ದರು. ಆದರೆ, ಜಿಲ್ಲಾಡಳಿತ ವಿಷಯವನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.

‘ಐತಿಹಾಸಿಕ ಸ್ಮಾರಕಗಳ ಮೂಲಕವೇ ವಿಶ್ವದಲ್ಲಿ ಗುರುತಿಸಿಕೊಂಡಿರುವ ಬೀದರ್‌ನ ಪ್ರಮುಖ ಮಾರ್ಗಗಳಲ್ಲಿ ಪಾದಚಾರಿ ರಸ್ತೆಗಳು ಇಲ್ಲದಿರುವುದು ಬೇಸರದ ಸಂಗತಿ. ಜಿಲ್ಲಾಡಳಿತ ಪಾದಚಾರಿಗಳ ಸುರಕ್ಷತೆಯ ದೃಷ್ಟಿಯಿಂದ ಪಾದಚಾರಿ ರಸ್ತೆಗಳ ನಿರ್ಮಾಣ ಮಾಡಬೇಕು’ ಒತ್ತಾಯಿಸುತ್ತಾರೆ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಜಿ. ಶೆಟಕಾರ್.

‘ನಾವು 21ನೇ ಶತಮಾನದಲ್ಲಿ ಇದ್ದರೂ ನಮ್ಮ ಮಕ್ಕಳಿಗೆ ಪಾದಚಾರಿ ಮಾರ್ಗ ಹಾಗೂ ಝಿಬ್ರಾ ಕ್ರಾಸಿಂಗ್‌ ಬಗ್ಗೆ ಸರಿಯಾಗಿ ತಿಳಿದಿಲ್ಲ. ಎಷ್ಟು ಹಿಂದೆ ಉಳಿದಿದ್ದೇವೆ ಎನ್ನುವುದಕ್ಕೆ ಇದೊಂದು ಉದಾಹರಣೆ ಸಾಕು. ಜಿಲ್ಲಾಡಳಿತ ಪಾದಚಾರಿ ಮಾರ್ಗ ನಿರ್ಮಿಸಲು ಆದ್ಯತೆ ನೀಡಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್‌.ಮನೋಹರ ಹೇಳುತ್ತಾರೆ.