ಗಾಂಜಾ ವಿರುದ್ಧ ಶಿವಮೊಗ್ಗ ಪೊಲೀಸ್ ಇಲಾಖೆ ಸಮರ..!

ಶಿವಮೊಗ್ಗ, ಡಿ. 9: ಇತ್ತೀಚಿನ ವರ್ಷಗಳಲ್ಲಿ ಅಕ್ಷರಶಃ ಗಾಂಜಾ ‘ಅಮಲಿ’ನಲ್ಲಿ ಮುಳುಗೇಳುತ್ತಿರುವ ಮಲೆನಾಡನ್ನು, ‘ನಶೆ’ ಮುಕ್ತಗೊಳಿಸುವ ನಿಟ್ಟಿನಲ್ಲಿ, ಶಿವಮೊಗ್ಗ
ಜಿಲ್ಲಾ ಪೊಲೀಸ್ ಇಲಾಖೆ ಸದ್ದುಗದ್ದಲವಿಲ್ಲದೆ ‘ಆಪರೇಷನ್’ ಆರಂಭಿಸಿದೆ. ಇದು ದಂಧೆಕೋರರು ಹಾಗೂ ವ್ಯಸನಿಗಳ ಮೈಚಳಿ ಬಿಡಿಸಿದೆ. ನಿದ್ದೆಗೆಡಿಸಿದೆ! ಗಾಂಜಾ ಮಾರಾಟಗಾರರು ಹಾಗೂ ಗಾಂಜಾ ಸೇವನೆ ಮಾಡುವವರ ಹೆಡೆಮುರಿ ಕಟ್ಟುವ, ಭಾರೀ ದೊಡ್ಡಕಾರ್ಯಾಚರಣೆಗೆ ಪೊಲೀಸ್ ಇಲಾಖೆ ಚಾಲನೆ ನೀಡಿದೆ. ಸಾಲುಸಾಲು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟುತ್ತಿದೆ. ಲಕ್ಷಾಂತರ ರೂ. ಮೌಲ್ಯದ ಹಸಿ, ಒಣ ಗಾಂಜಾ ವಶಕ್ಕೆ ಪಡೆದುಕೊಳ್ಳುತ್ತಿದೆ. ಪೊಲೀಸರು ಸಕ್ರಿಯವಾಗುತ್ತಿದ್ದಂತೆ, ಶಿವಮೊಗ್ಗ ನಗರ ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಗಾಂಜಾ ಕಾಳದಂಧೆ ಅಕ್ಷರಶಃ ಸ್ತಬ್ದಗೊಂಡಿದೆ. ಅದೆಷ್ಟೋ ದಂಧೆಕೋರರು ಈಗಾಗಲೇ ತಮ್ಮ
ವ್ಯವಹಾರ ಸ್ಥಗಿತಗೊಳಿಸಿದ್ದಾರೆ. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ!ಮತ್ತೋಂದೆಡೆ, ಇಷ್ಟು ದಿನ ಯಾವುದೇ ಅಂಕೆಯಿಲ್ಲದೆ ಕಂಡಕಂಡಲ್ಲಿ ರಾಜಾರೋಷವಾಗಿ ಗಾಂಜಾ
ಸೇದುತ್ತಾ, ನಶೆಯಲ್ಲಿ ನಾಗರೀಕರ ನೆಮ್ಮದಿಗೆ ಭಂಗ ತರುತ್ತಿದ್ದ ವ್ಯಸನಿಗಳು, ಬಂಧನ ಭೀತಿಯಿಂದ ಸ್ವಯಂ ವ್ಯಸನ ಮುಕ್ತರಾಗುತ್ತಿದ್ದಾರೆ! ಗಾಂಜಾ ಸೇದಿದರೆ ಎಲ್ಲಿ ಜೈಲು
ಕಂಬಿ ಎಣಿಸಬೇಕಾಗುತ್ತದೆಯೋ ಎಂಬ ಆತಂಕದಲ್ಲಿದ್ದಾರೆ.
ಸರ್ವಂ ಗಾಂಜಾ ಮಯಂ!: ಶಿವಮೊಗ್ಗ ಜಿಲ್ಲೆಗೂ ಗಾಂಜಾ ದಂಧೆಗೂ ದೊಡ್ಡ ನಂಟಿದೆ. ಕಳೆದ ಹಲವು ದಶಕಗಳಿಂದ  ಹೊಲ, ಗದ್ದೆ ಮಾತ್ರವಲ್ಲದೆ ಅರಣ್ಯ ಪ್ರದೇಶ ಸೇರಿದಂತೆ ಎಲ್ಲೆಂದರಲ್ಲಿ ಗಾಂಜಾ ಗಿಡ ಬೆಳೆಸಿಕೊಂಡು ಬರಲಾಗುತ್ತಿರುವುದು ಸುಳ್ಳಲ್ಲ. ಇಲ್ಲಿಂದಲ್ಲೇ ರಾಜ್ಯದ ವಿವಿಧೆಡೆ ಹಾಗೂ ಹೊರರಾಜ್ಯಗಳಿಗೂ ಗಾಂಜಾ ಸರಬರಾಜಾಗುತ್ತದೆ ಎಂಬ ಮಾಹಿತಿಯಿದೆ. ಇಷ್ಟೆಲ್ಲ ದೂರುಗಳಿದ್ದರೂ ಪೊಲೀಸ್ ಇಲಾಖೆ ಮಾತ್ರ ದಂಧೆ ಮಟ್ಟ ಹಾಕುವ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಿರಲಿಲ್ಲ. ಇದರಿಂದ ಗಾಂಜಾ ಅಮಲು ಎಲ್ಲೆಂದರಲ್ಲಿ
ವ್ಯಾಪಿಸಿಕೊಂಡಿತ್ತು. ಶಾಲಾ – ಕಾಲೇಜ್ ವಿದ್ಯಾರ್ಥಿಗಳು ಇದರ ವ್ಯಸನಿಗಳಾಗಿ ಪರಿವರ್ತಿತರಾಗುತ್ತಿದ್ದರು. ಕೆಲ ವ್ಯಸನಿಗಳು, ಗಾಂಜಾ ನಶೆಯಲ್ಲಿ ಕೊಲೆ ಸೇರಿದಂತೆ ನಾನಾ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಕಾನೂನು-ಸುವ್ಯವಸ್ಥೆಗೆ ಭಂಗ ತರುತ್ತಿದ್ದರು. ಅಮಾಯಕ ನಾಗರೀಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದರು.
ದಕ್ಷ ಅಧಿಕಾರಿಗಳು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಎಂ. ಲಕ್ಷ್ಮೀ ಪ್ರಸಾದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಟಿ.ಶೇಖರ್ ರಂತಹ ದಕ್ಷ ಪೊಲೀಸ್
ಅಧಿಕಾರಿಗಳು ಮಲೆನಾಡಿಗೆ ವ್ಯಾಪಿಸಿರುವ ಗಾಂಜಾ ನಶೆ ಇಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಗಾಂಜಾ ಮಾರಾಟ ಹಾಗೂ ಸೇವನೆ ಮಾಡುವವರ ವಿರುದ್ದ ಕಠಿಣ
ಕ್ರಮ ಜರುಗಿಸುವಂತೆ ತಮ್ಮ ಕೆಳಹಂತದ ಅಧಿಕಾರಿ-ಸಿಬ್ಬಂದಿಗಳಿಗೆ ಫರ್ಮಾನು ಹೊರಡಿಸಿದ್ದಾರೆ.ಕರ್ತವ್ಯ ಲೋಪ ಎಸಗುವ ಪೊಲೀಸ್ ಅಧಿಕಾರಿ-ಸಿಬ್ಬಂದಿ ವಿರುದ್ದ ಶಿಸ್ತುಕ್ರಮ ಜರುಗಿಸುವ ಸಂದೇಶ ರವಾನಿಸಿದ್ದಾರೆ. ಇದರ ಪರಿಣಾಮವಾಗಿ, ಕಳೆದೊಂದು ತಿಂಗಳಿನಿಂದ ಭಾರೀ ದೊಡ್ಡ ಸಂಖ್ಯೆಯ ದಂಧೆಕೋರರು ಹಾಗೂ ವ್ಯಸನಿಗಳು ಜೈಲುಪಾಲಾಗಿದ್ದಾರೆ. ಒಟ್ಟಾರೆ ಪೊಲೀಸರ ದಿಟ್ಟ ಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿರುವುದಂತೂ ಸತ್ಯವಾಗಿದೆ.