ಗಾಂಜಾ ಮಾರಾಟ: ಓರ್ವನ ಬಂಧನ

ತಿಪಟೂರು, ಡಿ. ೨೬- ಗಾಂಜಾ ಮಾರಾಟದಲ್ಲಿ ತೊಡಗಿದ್ದವರ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಓರ್ವನನ್ನು ಬಂಧಿಸಿ, ಈತನ ೭ ಮಂದಿ ಸಹಚರರ ವಿರುದ್ಧ ಎನ್.ಡಿ.ಪಿ.ಎಸ್. ಕಾಯ್ಡೆಯಡಿ ಪ್ರಕರಣ ದಾಖಲಿಸಿದ್ದಾರೆ.
ನಗರದ ವಿವಿಧೆಡೆ ಅಬಕಾರಿ ನಿರೀಕ್ಷಕ ವಿಜಯಕುಮಾರ್ ಕೆ.ಟಿ. ಅವರ ನೇತೃತ್ವದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ಮಾಡಿದ ಸಂದರ್ಭದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ರಾಕೇಶ್‌ನನ್ನು ಬಂಧಿಸಿ, ಒಂದು ದ್ವಿಚಕ್ರ ವಾಹನ, ೨೦೦ ಗ್ರಾಂ ಗಾಂಜಾ ಹಾಗೂ ಮೊಬೈಲ್‌ನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ ಬಂಧಿತ ರಾಕೇಶ್ ಜತೆ ಗಾಂಜಾ ಮಾರಾಟಕ್ಕೆ ಕೈಜೋಡಿಸಿರುವ ೭ ಮಂದಿಯ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ವಿಜಯಕುಮಾರ್ ತಿಳಿಸಿದ್ದಾರೆ.
ಇದಕ್ಕೂ ಮೊದಲು ತಿಪಟೂರಿನಲ್ಲ ೪ ಎನ್‌ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿ ೧೪ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತಾಲ್ಲೂಕಿನಾದ್ಯಂತ ಗಾಂಜಾ ಸರಬರಾಜು ಹಾಗೂ ಮಾರಾಟದ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಈ ದಂಧೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಇಲಾಖೆ ಹೊಂದಿದೆ ಎಂದು ಹೇಳಿದ್ದಾರೆ.
ಹಾಗೆಯೇ ಅಕ್ರಮ ಮದ್ಯ ಸಾಗಾಣಿಕೆ ಮಾಡುತ್ತಿದ್ದ ವೇಳೆ ದಾಳಿ ಮಾಡಿ ೨ ದ್ವಿಚಕ್ರ ವಾಹನ, ೧೨ ಲೀಟರ್ ಮದ್ಯ ಹಾಗೂ ೩ ಲೀಟರ್ ಬಿಯರ್‌ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಅಬಕಾರಿ ಉಪ ಅಧೀಕ್ಷಕರಾದ ಜಿ.ವಿ. ವಿಜಯಕುಮಾರ್ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಅಬಕಾರಿ ವಲಯ ನಿರೀಕ್ಷಕ ಕೆ.ಟಿ. ವಿಜಯಕುಮಾರ್, ರವಿಶಂಕರ್, ಬಿ.ಎಲ್. ಗಂಗರಾಜು, ಉಪನಿರೀಕ್ಷಕ ಜಿ.ಆರ್. ನಾಗರಾಜು, ರಕ್ಷಕರಾದ ಪ್ರಸನ್ನ, ಯತೀಶ್, ರೇವಣ್ಣ, ಶಿವಶಂಕರ್, ಮುಸ್ತಾಫ್, ರಾಜೇಶ್ವರಿ, ವೀಣಾ ಪಾಲ್ಗೊಂಡಿದ್ದರು.
ಗಾಂಜಾ ಮಾರಾಟದ ಬಗ್ಗೆ ಮಾಹಿತಿಯನ್ನು ಅಬಕಾರಿ ನಿರೀಕ್ಷಕರಾದ ವಿಜಯಕುಮಾರ್ ಕೆ.ಟಿ. ಮೊ: ೯೬೨೦೩೭೯೦೭೦ಗೆ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.