ಗಾಂಜಾ ಬೆಳೆದಿದ್ದ ವ್ಯಕ್ತಿ ಬಂಧನ

ಹನೂರು, ನ.01: ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿರುವ ಘಟನೆ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮ.ಮ.ಬೆಟ್ಟ ಗ್ರಾ.ಪಂ.ವ್ಯಾಪ್ತಿಯ ಪಡಸಲನತ್ತ ಗ್ರಾಮದ ಬೇಡಗಂಪಣ ಸಮುದಾಯದ ಮಾದಯ್ಯನ ಮಗ ಮಾದೇಶ್ ಅಲಿಯಾಸ್ ಬೇಳೆ ಮಾದೇಶ್ ಬಂಧಿತ ಆರೋಪಿ. ಈತ ವ್ಯವಸಾಯವನ್ನು ವೃತ್ತಿ ಮಾಡುತ್ತಿದ್ದು, ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿಯನ್ನು ಆಧಾರಿಸಿ ಡಿವೈಎಸ್‍ಪಿ ನಾಗರಾಜು ನೇತೃತ್ವದಲ್ಲಿ ಮಲೆಮಹದೇಶ್ವರ ಬೆಟ್ಟ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ಬಂಧಿತನಿಂದ 7ಕೆ.ಜಿ.35 ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡು 33/2020 ಕೇಸ್ ದಾಖಲಿಸಿ, ಮುಂಜಾಗ್ರತ ಕ್ರಮವಾಗಿ ಕೊರೊನಾ ಸೋಂಕಿನ ಪರೀಕ್ಷೆಯನ್ನು ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಾಳಿಯಲ್ಲಿ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಜಿ.ಎನ್.ರಮೇಶ್, ಸಬ್‍ಇನ್ಸ್‍ಪೆಕ್ಟರ್ ವೀರಣ್ಣರಾಧ್ಯ, ಪೊಲೀಸ್ ಕಾನ್ಸ್‍ಟೆಬಲ್‍ಗಳಾದ ರಾಜಪ್ಪ, ಪ್ರಭು, ಬಾಬು, ಪರಶಿವ, ಕಂದಾಯ ಇಲಾಖೆಯ ಮಾದೇವಸ್ವಾಮಿ, ಅರಣ್ಯ ರಕ್ಷಕ ಮಲ್ಲಿಕಾರ್ಜುನ ಇದ್ದರು.