ಗಾಂಜಾ ಗಿಡ ಬೆಳೆದ ವೈದ್ಯಕೀಯ ವಿದ್ಯಾರ್ಥಿಗಳ ಸೆರೆ

ಶಿವಮೊಗ್ಗ, ಜೂ. ೨೫: ಬಾಡಿಗೆಗಿದ್ದ ಮನೆಯೊಂದರ ಕೋಣೆಯಲ್ಲಿ, ಅತ್ಯಂತ ಗುಪ್ತವಾಗಿ ಹೂವಿನ ಪಾಟ್ ಗಳಲ್ಲಿ ಗಾಂಜಾ ಗಿಡ ಬೆಳೆದಿದ್ದ ಆರೋಪಿ ಸೇರಿದಂತೆ, ಮೂವರು ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳನ್ನು ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ತಮಿಳುನಾಡು ರಾಜ್ಯದ ಕೃಷ್ಣಗಿರಿಯ ಜಕ್ಕಪ್ಪನಗರ ನಿವಾಸಿ ವಿಘ್ನರಾಜ್ (೨೮), ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಅಡಿಮಲಿ ಟೌನ್ ನಿವಾಸಿ ವಿನೋದ್ ಕುಮಾರ್ (೨೭) ಹಾಗೂ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕಡಗತ್ತೂರು ನಿವಾಸಿ ಪಾಂಡಿ ದೊರೈ (೨೭) ಬಂಧಿತ ಆರೋಪಿಗಳಾಗಿದ್ದಾರೆ.
ಇವರೆಲ್ಲರು ಖಾಸಗಿ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳಾಗಿದ್ದಾರೆ. ಇದರಲ್ಲಿ ವಿಘ್ನರಾಜ್ ಗಾಂಜಾ ಗಿಡ ಬೆಳೆದ ಆರೋಪಿಯಾಗಿದ್ದಾನೆ. ಈತ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಸಮೀಪದ ಶಿವಗಂಗಾ ಲೇಔಟ್ ನಲ್ಲಿನ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ.
ವಿಘ್ನರಾಜ್ ನು ಗಾಂಜಾ ಗಿಡಗಳನ್ನು ಬೆಳೆದು ಒಣಗಿಸಿ, ಸಣ್ಣ ಸಣ್ಣ ಪ್ಯಾಕೆಟ್ ಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದ. ಉಳಿದಿಬ್ಬರು ಆರೋಪಿಗಳಾದ ವಿನೋದ್ ಕುಮಾರ್ ಹಾಗೂ ಪಾಂಡಿ ಗಾಂಜಾ ಖರೀದಿಗೆಂದು ಬಂದವರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ ೨೨೭ ಗ್ರಾಂ ತೂಕದ ಒಣ ಗಾಂಜಾ, ೧ ಕೆಜಿ ೫೩೦ ಗ್ರಾಂ ತೂಕದ ಹಸಿ ಗಾಂಜಾ, ೧೦ ಗ್ರಾಂ ಚರಸ್, ಗಾಂಜಾ ಬೀಜಗಳಿದ್ದ ೧ ಚಿಕ್ಕ ಬಾಟಲ್, ೩ ಕೆನಾಬಿಸ್ ಆಯಿಲ್ ಸೀರಂಜ್ ರೀತಿಯ ವಸ್ತುಗಳು, ೩ ಕಬ್ಬಿಣದ ರಾಡ್ ಗಳ ಮೇಲೆ ಕಪ್ಪು ಬಣ್ಣದ ಕವರ್ ಸುತ್ತಿದ್ದ ಸ್ಯಾಂಡ್ ಗಳು,
ಗಾಂಜಾ ಪುಡಿ ಮಾಡಲು ಬಳಸುವ ೨ ಡಬ್ಬಿಗಳು, ೧ ಎಲೆಕ್ಟ್ರಾನಿಕ್ ತೂಕದ ಯಂತ್ರ, ೧ ಎಕ್ಸಿಟ್ ಫ್ಯಾನ್, ೬ ಟೇಬಲ್ ಫ್ಯಾನ್ ಗಳು, ೨ ಸೆಸರ್ ಗಳು, ೩ ಎಲ್.ಇ.ಡಿ. ಲೈಟ್ ಗಳು, ರೋಲಿಂಗ್ ಪೇಪರ್, ೨ ಹುಕ್ಕಾ ಕೊಳವೆ, ೪ ಹುಕ್ಕಾ ಕ್ಯಾಪ್ ಗಳು, ಗಾಂಜಾ ಗಿಡದ ಕಾಂಡಗಳು, ೧೯ ಸಾವಿರ ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಜೂ. ೨೩ ರಂದು ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಮೂವರು ಆರೋಪಿಗಳ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಸುರೇಶ್ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಅಭಯ್ ಪ್ರಕಾಶ್ ಸೋಮನಾಳ್, ಸಬ್ ಇನ್ಸ್’ಪೆಕ್ಟರ್ ರಮೇಶ್ ಟಿ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಗಾಂಜಾ ಗಿಡ ಬೆಳೆಯಲು ಹೈಟೆಕ್ ವ್ಯವಸ್ಥೆ!
*** ಆರೋಪಿ ವಿಘ್ನರಾಜ್ ತಂಗಿದ್ದ ಮನೆಯಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗಿತ್ತು. ಇದಕ್ಕಾಗಿ ಮನೆಯ ಕೊಠಡಿಯೊಂದನ್ನು ಹೈಟೆಕ್ ಆಗಿ ಪರಿವರ್ತಿಸಲಾಗಿತ್ತು! ಸ್ಪೈಡರ್ ಫಾರ್ಮರ್ ಹೆಸರಿನ ಬೋರ್ಡ್ ಕೂಡ ಆರೋಪಿ ಹಾಕಿದ್ದ. ಕೊಠಡಿಯೊಳಗೆ ಪ್ರತ್ಯೇಕ ಟೆಂಟ್ ಹಾಕಲಾಗಿತ್ತು. ಅದರೊಳಗೆ ಹೊರಗಿನಿಂದ ಗಾಳಿ-ಬೆಳಕು ಬರದಂತೆ ವ್ಯವಸ್ಥೆ ಮಾಡಲಾಗಿತ್ತು.
ಟೇಬಲ್ ಫ್ಯಾನ್ ಹಾಕಲಾಗಿತ್ತು. ಅದರ ಗಾಳಿ ಎಕ್ಸಿಟ್ ಫ್ಯಾನ್ ಮೂಲಕ ಹೊರ ಹೋಗುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಹಾಗೂ ಸೂರ್ಯನ ಬೆಳಕಿನ ರೀತಿಯಲ್ಲಿ ಎಲ್.ಇ.ಡಿ. ಲೈಟ್ ಪ್ಲೇಟ್ ಗಳನ್ನು ಅಳವಡಿಸಲಾಗಿತ್ತು. ತಾಪಮಾನ ನಿಯಂತ್ರಣ ವ್ಯವಸ್ಥೆ ರೂಪಿಸಿ, ಹೂವಿನ ಕುಂಡಗಳಲ್ಲಿ ಗಾಂಜಾ ಗಿಡಗಳನ್ನು ಬೆಳೆಯಲಾಗಿತ್ತು. ಇದು ಸ್ವತಃ ಪೊಲೀಸರನ್ನೇ ಹುಬ್ಬೇರುವಂತೆ ಮಾಡಿದೆ.