ಗವಿ ಗಂಗಾಧರೇಶ್ವರ ದೇಗುಲದಲ್ಲಿ ಸೂರ್ಯರಶ್ಮಿಗೆ ಕಾದ ನಿಂತ ಭಕ್ತ ಸಮೂಹ

ಬೆಂಗಳೂರು,ಜ.೧೪- ನಾಡಿನಾದ್ಯಂತ ಇಂದು ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ. ಸೂರ್ಯ ತನ್ನ ಪಥವನ್ನು ಬದಲಾಯಿಸುವ ದಿನವಿದು.ವರ್ಷದ ಮೊದಲ ಎಳ್ಳು ಬೆಲ್ಲ ಹಬ್ಬದ ಹಿನ್ನೆಲೆಯಲ್ಲಿ ಇಂದು ಶಿವನ ಆಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ನಗರದ ಬಸವನಗುಡಿಯಲ್ಲಿರುವ ಶ್ರೀ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಶಿವನಿಗೆ ಇಂದು ವಿಶೇಷ ಅಭಿಷೇಕ ಮಾಡಲಾಗುತ್ತಿದ್ದು ದೇವಸ್ಥಾನದಲ್ಲಿ ಇಂದು ಸಂಜೆ ಸೂರ್ಯದೇವ ಶಿವಲಿಂಗವನ್ನು ಸ್ಪರ್ಶಿಸಲಿದ್ದಾನೆ.
ಈ ಐತಿಹಾಸಿಕ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಸಾಲುಗಟ್ಟಿ ನಿಲ್ಲಲಿದ್ದಾರೆ.ಇಂದು ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ಪಥ ಬದಲಾಯಿಸಲಿದ್ದಾನೆ. ಸೂರ್ಯ ಪಥ ಬದಲಿಸುವಾಗ ಶಿವನಿಗೆ ನಮಿಸಲಿದ್ದಾನೆ. ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯರಶ್ಮಿಯಿಂದ ಪುಳಕಿತನಾದ ಶಿವನನ್ನು ಕಣ್ತುಂಬಿಕೊಳ್ಳಲು ಭಕ್ತರಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ.
ಇಂದು ಸಂಜೆ ೫:೧೭ರಿಂದ ೫:೨೨ರೊಳಗೆ ಸೂರ್ಯನ ಕಿರಣಗಳು ಶಿವಲಿಂಗವನ್ನು ಆವರಿಸಲಿದೆ.
ಗವಿಗಂಗಾಧರೇಶ್ವರ ದೇವಾಲಯಕ್ಕೆ ಬೆಳಗ್ಗೆಯಿಂದಲೇ ಭಕ್ತರು ದರ್ಶನಕ್ಕೆ ಬರುತ್ತಿದ್ದು, ವಿಶೇಷ ಪೂಜೆ ಹಿನ್ನೆಲೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇಂದು ಬೆಳಗ್ಗೆ ೭ ರಿಂದ ಪಂಚಾಮೃತ, ರುದ್ರಾಭಿಷೇಕ ನೇರವೇರಿದೆ. ಮುಂಜಾನೆಯಿಂದಲೇ ಭಕ್ತರ ದಂಡು ಕಾದು ನಿಂತು ಶಿವನ ಮಂಗಳಾರತಿ ಪಡೆದು ಧನ್ಯರಾದರು.
ಸಂಜೆ ಶಿವಲಿಂಗದ ಮೇಲೆ ಬೀಳುವ ಸೂರ್ಯರಶ್ಮಿಯನ್ನು ಕಣ್ತುಂಬಿಕೊಳ್ಳಲು ಗವಿ ಗಂಗಾಧರೇಶ್ವರ ದೇವಸ್ಥಾನದ ಆವರಣದಲ್ಲಿ ಪೆಂಡಾಲ್ ಹಾಕಿ, ಎಲ್‌ಇಡಿ ಟಿವಿ ಅಳವಡಿಸಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಮಾತ್ರ ದೇವಸ್ಥಾನದೊಳಗೆ ಬಿಡಲಾಗುವುದು.