ಗವಿ ಗಂಗಾಧರನ ಸ್ಪರ್ಶಿಸಿದ ಸೂರ್ಯ ರಶ್ಮಿ

ಬೆಂಗಳೂರು,ಜ.14-ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡಿದ್ದು ಇಂದು ಸಂಜೆ 5:17ರ ಸಮಯದಲ್ಲಿ ಗವಿ ಗಂಗಾಧರೇಶ್ವರ ದೇಗುಲದಲ್ಲಿ ಸೂರ್ಯನ ರಶ್ಮಿ ಗವಿ ಗಂಗಾಧರೇಶ್ವರ ಸ್ವಾಮಿಯನ್ನು ಸ್ಪರ್ಶಿಸುವ ಮೂಲಕ ಕಿರಣಾಭಿಷೇಕ ಮಾಡಿತು.
ಉತ್ತರಾಯಣ ಆರಂಭಗೊಳ್ಳುವ ಶುಭ ಘಳಿಗೆಯಲ್ಲಿ ಭಾಸ್ಕರ ತನ್ನ ಪಥ ಬದಲಿಸಿದ ಹಿನ್ನೆಲೆಯಲ್ಲಿ ಸೂರ್ಯ ರಶ್ಮಿ ಗವಿ ಗಂಗಾಧರೇಶ್ವರನನ್ನು ಸ್ಪರ್ಶಿಸಿತು. ಆರಂಭದಲ್ಲಿ ನಂದಿವಾಹನವನ್ನು ಸ್ಪರ್ಶಿಸಿದ ಸೂರ್ಯರಶ್ಮಿಯು ಕೆಲ ಕ್ಷಣಗಳಲ್ಲೇ ನಂದಿಯ ಎರಡು ಕೊಂಬಿನ ಮುಖಾಂತರ ಶಿವಲಿಂಗವನ್ನು ಸ್ಪರ್ಶಿಸಿತು. ಈ ಕೌತುಕ ಸಂಜೆ 5.13ರಿಂದ ಪ್ರಾರಂಭವಾಗಿ 2 ನಿಮಿಷ 13 ಸೆಕೆಂಡುಗಳ ಕಾಲ ನಡೆಯಿತು. ಪಾಣಿಪೀಠದಿಂದ ಲಿಂಗದವರೆಗೆ ಎರಡು ನಿಮಿಷ ಹಾಗೂ ಲಿಂಗದಿಂದ ಶಿರದವರೆಗೆ ಸುಮಾರು 13 ಸೆಕೆಂಡುಗಳ ತನಕ ರಶ್ಮಿಯ ಅಭಿಷೇಕ ಆಯಿತು.
ಈ ಐತಿಹಾಸಿಕ ನೆರಳು-ಬೆಳಕಿನಾಟಕ್ಕೆ ಗುಟ್ಟಳ್ಳಿಯ ಗವಿಗಂಗಾಧರ ದೇವಾಲಯ ಸಾಕ್ಷಿಯಾಯಿತು. ಸೂರ್ಯನ ಕಿರಣ ಶಿವಲಿಂಗವನ್ನು ಸ್ಪರ್ಶಿಸುತ್ತಿದ್ದಂತೆ ಲಿಂಗಕ್ಕೆ ಹಾಲಿನ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಮಹಾ ಕೌತುಕವನ್ನು ಕಣ್ತುಂಬಿಕೊಳ್ಳಲು ಪ್ರತಿ ವರ್ಷ ದೇಗುಲದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿರುತ್ತಿದ್ದರು. ಆದರೆ ಕೋವಿಡ್‌ ಕಾರಣದಿಂದಾಗಿ ಈ ಬಾರಿ ದೇಗುಲದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿಲ್ಲ. ಹೀಗಾಗಿ ಭಕ್ತರು ಮನೆಯಲ್ಲೇ ಇದ್ದು ಟಿವಿ ಮೂಲಕ ಕೌತುಕವನ್ನು ಕಣ್ತುಂಬಿಕೊಂಡಿದ್ದಾರೆ.
ಕಳೆದ ವರ್ಷ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತಾದರೂ, ಸೂರ್ಯ ಮೋಡದ ಮರೆಯಲ್ಲಿ ಹಾದು ಹೋಗಿದ್ದ. ಹೀಗಾಗಿ ಕೌತುಕ ಕಣ್ತುಂಬಿಕೊಳ್ಳಲು ಬಂದಿದ್ದ ಭಕ್ತರಿಗೆ ನಿರಾಶೆಯಾಗಿತ್ತು. ಆದರೆ ಈ ಬಾರಿ ಕೋವಿಡ್‌ ಕಾರಣಕ್ಕೆ ದೇಗುಲ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡಿಲ್ಲ