ಗವಿಮಠಕ್ಕೆ ಭೇಟಿ ನೀಡಿ ಅಭಿನವ ಗವಿಶ್ರೀಗಳ ಆಶೀರ್ವಾದದ ಪ್ರೇರಣೆ ಪಡೆದುಕೊಂಡ ಸಚಿವ ಎಂ.ಬಿ.ಪಾಟೀಲ

ವಿಜಯಪುರ :ಜೂ.8: ನೂತನ ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವರಾದ ಬಳಿಕ ಪ್ರಪ್ರಥಮ ಬಾರಿಗೆ ಜೂನ್ 3ರಂದು ಜಿಲ್ಲೆಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಶಾಸಕ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ ಅವರು ನಾಡಿನ ಮನೆಮಾತಾಗಿರುವ ಸುಪ್ರಸಿದ್ಧ ಸುಕ್ಷೇತ್ರ ಕೊಪ್ಪಳದ ಗವಿಮಠಕ್ಕೆ ಭೇಟಿ ನೀಡಿ ಅಭಿನವ ಗವಿಶ್ರೀಗಳ ಆಶೀರ್ವಾದದ ಪ್ರೇರಣೆ ಪಡೆದುಕೊಂಡರು.
ಪೂರ್ವನಿಗದಿಯಂತೆ ಅಂದು ಸಚಿವರು ಬೆಳಗ್ಗೆ ಮೊದಲಿಗೆ ಚಿತ್ರದುರ್ಗದ ಮುರುಗಾ ಮಠಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡ ಬಳಿಕ ಅಲ್ಲಿಂದ ಹೊರಟು ಹೊಸಪೇಟೆ ಮಾರ್ಗವಾಗಿ ನೇರವಾಗಿ ಕೊಪ್ಪಳ ನಗರಕ್ಕೆ ಆಗಮಿಸಿದರು. ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ಕೊಪ್ಪಳ ನಗರಕ್ಕೆ ಆಗಮಿಸಿದ ಸಚಿವರು ನೇರವಾಗಿ ಗವಿಮಠಕ್ಕೆ ಭೇಟಿ ನೀಡಿದರು.
ಗವಿಮಠಕ್ಕೆ ಭೇಟಿ ನೀಡಿದ ಸಚಿವರಿಗೆ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಅವರು ಸಚಿವ ಎಂ.ಬಿ.ಪಾಟೀಲ ಅವರಿಗೆ ಶಾಲುಹೊದಿಸಿ, ಹೂಗುಚ್ಛ ನೀಡಿ ಆಶೀರ್ವದಿಸಿದರು. ಉತ್ತರ ಕರ್ನಾಟಕ ಭಾಗದ ಬೇರೆ ಬೇರೆ ಬರಪೀಡಿತ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಯೋಜನೆಗಳ ಕಾರ್ಯನುಷ್ಠಾನ ಸೇರಿದಂತೆ ಇನ್ನೂ ಹತ್ತು ಹಲವಾರು ವಿಷಯಗಳ ಬಗ್ಗೆ ಗವಿಶ್ರೀಗಳು ಮತ್ತು ಸಚಿವರೊಂದಿಗೆ 25 ನಿಮಿಷಕ್ಕೂ ಹೆಚ್ಚು ಕಾಲ ಆಪ್ತ ಮಾತುಕತೆ ನಡೆಸಿದರು.
ಕೊಪ್ಪಳ ಜಿಲ್ಲೆಯ ಭೂಮಿಯಲ್ಲಿ ಒಂದು ವಿಶೇಷತೆ ಇದೆ. ಇಲ್ಲಿನ ಜನರು ಪರಿಶ್ರಮ ಸಹ ದೊಡ್ಡದು. ಶಿಕ್ಷಣ, ಆರೋಗ್ಯದಂತಹ ವಿಷಯಗಳ ಬಗ್ಗೆ ಈ ಭಾಗದ ಜನರಿಗೆ ಇನ್ನು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಈ ಭಾಗಕ್ಕೆ ನೀರಾವರಿ ಯೋಜನೆಗಳು ಬರಬೇಕು. ವಿವಿಧ ಫ್ಯಾಕ್ಟರಿಗಳಲ್ಲಿ ದುಡಿಯುವ ಕಾರ್ಮಿಕರ ಮತ್ತು ಬರಡು ನೆಲದಲ್ಲಿ ಕೃಷಿ ಮಾಡುವ ರೈತರ ಮಕ್ಕಳಿಗೆ ಸಹ ಸರಿಯಾದ ಶಿಕ್ಷಣ ಸಿಗುವಂತಾಗಬೇಕು ಎಂದು ಚರ್ಚೆಯಲ್ಲಿ ಸಚಿವರಿಗೆ ಗವಿಶ್ರೀಗಳು ಸಲಹೆ ನೀಡಿದರು.
ಅಂದುಕೊಂಡದ್ದನ್ನು ಸಾಧಿಸುವ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಬದ್ಧತೆ ಮತ್ತು ಸಂಕಲ್ಪ ಅನನ್ಯವಾದುದಾಗಿದೆ. ಗುರುತರ ಮತ್ತು ವಿನೂತನ ಶೈಕ್ಷಣಿಕ, ಸಾಮಾಜಿಕ ಕಾರ್ಯಗಳ ಮೂಲಕ ಕೊಪ್ಪಳ ಗವಿಮಠವು ನಾಡಿನಾದ್ಯಂತ ಹೆಸರು ಮಾಡಿದೆ. ಗವಿಮಠವನ್ನು ನಾಡಿನ ಎರಡನೇ ಸಿದ್ಧಗಂಗಾ ಕ್ಷೇತ್ರ ಎಂದು ಹೇಳಲು ತಮಗೆ ಖುಷಿ ಆಗುತ್ತದೆ ಎಂದು ಸಚಿವರು ಗವಿಶ್ರೀಗಳಿಗೆ ತಿಳಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೊಪ್ಪಳ ಗವಿಮಠವು ಜನ ಪ್ರೀತಿ ಗಳಿಸಿ, ಸರ್ಕಾರ ಮಾಡುವ ಕೆಲಸ ಮಾಡುತ್ತಿದೆ. ಈ ದಿಶೆಯಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಪರಿಶ್ರಮವು ಇತರರಿಗೆ ಪ್ರೇರಣಾದಾಯಕವಾಗಿದೆ. ವಿಜಯಪುರದಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳು ತಮಗೆ ಪ್ರೇರಕ ಶಕ್ತಿ ಆಗಿರುವಂತೆ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರಿಗಳ ಆಶೀರ್ವಾದವು ಸಹ ತಮ್ಮನ್ನು ಆಶಾವಾದದ ದೂರದ ದಾರಿಗೆ ಕೊಂಡೋಯ್ಯಲಿದೆ ಎಂದು ತಾವು ಗವಿಮಠಕ್ಕೆ ಭೇಟಿ ನೀಡಿದ್ದಾಗಿ ಸಚಿವರು ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಸೇರಿದಂತೆ ಇನ್ನೀತರರು ಇದ್ದರು.