ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದ ವಿಕ್ರಾಂತ್ ರೋಣ


ಬೆಂಗಳೂರು,ಜು.೨೯- ದೇಶ ವಿದೇಶಗಳಲ್ಲಿ ಏಕಕಾಲಕ್ಕೆ ತೆರೆಗೆ ಬಂದ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ “ವಿಕ್ರಾಂತ ರೋಣ” ಮೊದಲ ದಿನ ದಾಖಲೆ ಗಳಿಕೆ ಮಾಡಿದೆ.
ಮೂಲಗಳ ಪ್ರಕಾರ ಬರೋಬ್ಬರಿ ೨೦ ರಿಂದ ೨೨ ಕೋಟಿ ರೂಪಾಯಿ ಸಂಗ್ರಹ ಮಾಡಲಾಗಿದ್ದು . ಈ ಪೈಕಿ ಕರ್ನಾಟಕದಲ್ಲಿ ಅತಿ ಹೆಚ್ಚಿನ ಹಣ ಸಂಗ್ರಹವಾಗಿದೆ ಎನ್ನಲಾಗಿದೆ.
ಅಂದಾಜಿನ ಪ್ರಕಾರ ಕರ್ನಾಟಕದಲ್ಲಿ ಮೊದಲ ದಿನ ೧೪.೮೫ ಕೋಟಿ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ೨.೨ ಕೋಟಿ ರೂಪಾಯಿ,, ತಮಿಳುನಾಡಿನಲ್ಲಿ ಒಂದು ಕೋಟಿ, ಕೇರಳದಲ್ಲಿ ೧೫ಲಕ್ಷ, ಇನ್ನುಳಿದಂತೆ ದೇಶಾದ್ಯಂತ ೩ ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿದೆ.
ಬಾಲಿವುಡ್ ಸೇರಿದಂತೆ ಹಿಂದಿ ಭಾಷಿಕರು ಹೆಚ್ಚು ಇರುವ ರಾಜ್ಯಗಳಲ್ಲಿ ವಿಕ್ರಾಂತ್ ರೋಣ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ವಾರಾಂತ್ಯದಲ್ಲಿ ಹೆಚ್ಚಿನ ಹಣ ಸಂಗ್ರಹವಾಗುವ ನಿರೀಕ್ಷೆ ಇದೆ.
ಕೆಜಿಎಫ್ -೨ ಮೊದಲ ದಿನದ ಗಳಿಕೆಗಿಂತ ವಿಕ್ರಾಂತ್ ರೋಣ ದಾಖಲೆ ನಿರ್ಮಿಸಿದೆ ಎನ್ನಲಾಗಿದ್ದು ಈ ಬಗ್ಗೆ ಚಿತ್ರದ ನಿರ್ಮಾಪಕರ ಜಾಕ್ ಮಂಜು ಈ ಬಗ್ಗೆ ಖಚಿತ ಪಡಿಸಬೇಕಾಗಿದೆ.
ವಿಕ್ರಾಂತ್ ರೋಣ ಚಿತ್ರಕ್ಕೆ ಕರ್ನಾಟಕ ಸೇರಿದಂತೆ ದೇಶ-ವಿದೇಶಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಕಿಚ್ಚ ಸುದೀಪ್ ಅವರ ಅಭಿಮಾನಿಗಳಲ್ಲಿ ಹರ್ಷದ ವಾತಾವರಣ ಸೃಷ್ಟಿ ಮಾಡಿದೆ.
ಮೊದಲ ದಿನದ ವಿಕ್ರಂತ್ ರೋಣ ಚಿತ್ರದ ಗಳಿಕೆ ಇನ್ನು ಮತ್ತಷ್ಟು ಹೆಚ್ಚಾಗಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದು ಕೂಡ ಬಾಕ್ಸಾಫೀಸ್ ಪರಿಣಿತರು ಹೇಳಿದ್ದಾರೆ.
ಕೆಜಿಎಫ್ ೨ ಚಿತ್ರದ ಬಳಿಕ ಕನ್ನಡ ಚಿತ್ರವೊಂದು ದೇಶ-ವಿದೇಶಗಳಲ್ಲಿ ಭಾರಿ ಸದ್ದು ಮಾಡುತ್ತಿರುವುದು ಕನ್ನಡ ಚಿತ್ರರಂಗದ ಬೆಳವಣಿಗೆ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯಾಗಿದೆ.