ಗರ್ಭ ಸಂಸ್ಕಾರ ಅಭಿಯಾನಕ್ಕೆ ಚಾಲನೆ

ನವದೆಹಲಿ, ಮಾ.೭- ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಸಂವರ್ಧಿನಿ ನ್ಯಾಸ್, ಗರ್ಭಿಣಿಯರಿಗೆ ಗರ್ಭದಲ್ಲಿರುವ ಮಕ್ಕಳಿಗೆ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಲಿಸಲು ’ಗರ್ಭ ಸಂಸ್ಕಾರ’ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ.

ತಾಯಿ ಗರ್ಭಿಣಿಯಾಗಿರುವಾಗಲೇ ಆಕೆಗೆ ಸಂಸ್ಕಾರ ಕೊಡುವುದರ ಮೂಲಕ, ಮಗುವಿಗೂ ಸಂಸ್ಕೃತಿ ಮತ್ತು ಮೌಲ್ಯಗಳನ್ನು ನೀಡುವುದು ಉದ್ದೇಶ ಎಂದು ಸಂವರ್ಧಿನೀ ನ್ಯಾಸದ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಮಾಧುರಿ ಮರಾಠೆ ಹೇಳಿದ್ದಾರೆ.
ಈ ಅಭಿಯಾನದಲ್ಲಿ ಸ್ತ್ರೀರೋಗ ತಜ್ಞರು, ಆಯುರ್ವೇದ ವೈದ್ಯರು, ಯೋಗ ಶಿಕ್ಷಕರು ಇರಲಿದ್ದಾರೆ. ಸ್ತ್ರೀ ಗರ್ಭ ಧರಿಸಿದ ಸಮಯದಿಂದ ಒಟ್ಟು ೨ ವರ್ಷಗಳವರೆಗೆ ಭಗವದ್ಗೀತೆ, ರಾಮಾಯಣವನ್ನು ಪಠಣ, ಯೋಗ ತರಬೇತಿ ನೀಡಲಾಗುತ್ತದೆ.
ಈ ಕಾರ್ಯಕ್ರಮವು ಗರ್ಭಾವಸ್ಥೆಯಿಂದ ಎರಡು ವರ್ಷದ ಶಿಶುಗಳಿಗೆ ಪ್ರಾರಂಭವಾಗುತ್ತದೆ. ಗೀತಾ ಶ್ಲೋಕಗಳ ಪಠಣ, ರಾಮಾಯಣದ ಚೌಪೈಗಳಿಗೆ ಒತ್ತು ನೀಡಲಾಗುವುದು. ಇದರಿಂದ ಗರ್ಭದಲ್ಲಿರುವ ಮಗು ೫೦೦ ಪದಗಳನ್ನು ಕಲಿಯಬಹುದು ಎಂದು ಮಾಧುರಿ ಮರಾಠೆ ಹೇಳಿದರು
ಈ ಅಭಿಯಾನದ ಮೂಲಕ ಒಟ್ಟು ೧೦೦೦ ಮಹಿಳೆಯರನ್ನು ತಲುಪುವುದು ಸಂವರ್ಧಿನೀ ನ್ಯಾಸದ ಉದ್ದೇಶ. ಮಹಾಭಾರತದಲ್ಲಿ ಅಭಿಮನ್ಯು ಗರ್ಭದಲ್ಲಿರುವಾಗಲೇ ಚಕ್ರವ್ಯೂಹ ಭೇದಿಸುವುದನ್ನು ಶ್ರೀಕೃಷ್ಣನಿಂದಲೇ ಕಲಿತಿದ್ದ ಎಂಬ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಹೀಗೆ ಗರ್ಭದಲ್ಲಿರುವಾಗಲೇ ಮಗುವಿಗೆ ಶಿಕ್ಷಣ ನೀಡಲು ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಈ ಅಭಿಯಾನದ ಭಾಗವಾಗಿ ಸಂವರ್ಧಿನಿ ನ್ಯಾಸ್ ಭಾನುವಾರ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಕಾರ್ಯಾಗಾರವನ್ನು ನಡೆಸಿತು. ಇದರಲ್ಲಿ ಏಮ್ಸ್-ದೆಹಲಿ ಸೇರಿದಂತೆ ಹಲವಾರು ಸ್ತ್ರೀರೋಗತಜ್ಞರು ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.