ಗರ್ಭಿಣಿ ಸ್ತ್ರೀಯರು ಪೋಷಕಾಂಶಯುಕ್ತ ಆಹಾರ ಪಡೆದುಕೊಳ್ಳಿ

ಮರಿಯಮ್ಮನಹಳ್ಳಿ, ಜ.02: ಗರ್ಭಿಣಿ ಹಾಗೂ ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೋಷಕಾಂಶಯುಕ್ತ ಆಹಾರ ಸಿಗುತ್ತಿದ್ದು, ಇದರ ಲಾಭವನ್ನು ಎಲ್ಲ ಗರ್ಭಿಣಿ ಸ್ತ್ರೀಯರು ಪಡೆದುಕೊಳ್ಳಿ ಎಂದು ಮರಿಯಮ್ಮನಹಳ್ಳಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಕಾಂತಲತಾ ಪ್ರಕಾಶ್ ಸಲಹೆ ನೀಡಿದರು.
ಅವರು ಮರಿಯಮ್ಮನಹಳ್ಳಿಯ 7ನೇ ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರ ಸೀಮಂತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಸರ್ಕಾರದಿಂದ ಅನೇಕ ಸೌಲಭ್ಯಗಳಿದ್ದು ಅದರ ಸದುಪಯೋಗ ಪಡೆಯುವುದರ ಜೊತೆಗೆ ಗರ್ಭಿಣಿ ಸ್ತ್ರೀಯರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವಂತೆಯೂ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಲಹಾ ಸಮಿತಿಯ ಸದಸ್ಯೆಯರಾದ ಅಂಬಮ್ಮ , ಆಶಾ, ಅಂಗನವಾಡಿ ಕಾರ್ಯಕರ್ತೆ ಜಿ ಗಂಗಮ್ಮ ಹಾಗೂ ಸಹಾಯಕಿ ಪುಷ್ಪವತಿ ಉಪಸ್ಥಿತರಿದ್ದರು. ತಾಯಂದಿರ ಮಕ್ಕಳ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿಸಲಾಯಿತು