ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ

ಕೆ.ಆರ್.ಪೇಟೆ.ಡಿ.03: ಆರೋಗ್ಯವಂತ ವ್ಯಕ್ತಿ ತನ್ನ ಸುತ್ತಲೂ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕಾಣಿಕೆ ನೀಡಬೇಕು ಎಂದು ವೈದ್ಯಾಧಿಕಾರಿ ಡಾ.ಸಾಗರ್ ತಿಳಿಸಿದರು.
ಅವರು ತಾಲ್ಲೂಕಿನ ಅಕ್ಕಿಹೆಬ್ಬಾಳು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮದಲ್ಲಿ ಮಾತನಾಡಿ ಗರ್ಭಿಣಿಯರು ಮುಂದಿನ ಭವ್ಯ ಭಾರತದ ಪ್ರಜೆಗಳಿಗೆ ಜನ್ಮನೀಡಬೇಕಾಗಿದ್ದು ಸೂಕ್ತ ಸಮಯಕ್ಕೆ ಸರಿಯಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು, ಗರ್ಭಿಣಿಯರ ಆರೈಕೆ, ಸೇವಿಸಬೇಕಾದ ಉತ್ತಮ ಪೌಷ್ಠಿಕ ಆಹಾರ ಕುರಿತು ಆರೋಗ್ಯ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡಿದರು. ಸಾಂಸ್ಥಿಕ ಹೆರಿಗೆ, ನವಜಾತ ಶಿಶು ಆರೈಕೆ ಹಾಗೂ ಬಾಣಂತಿ ಹಾರೈಕೆ ಕುರಿತು ತಿಳುವಳಿಕೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಕೇಂದ್ರದ ಮಹಿಳಾ ವೈದ್ಯಾಧಿಕಾರಿಗಳಾದ ಡಾಕ್ಟರ್ ದೀಪ್ತಿ ಆರೋಗ್ಯ ಇಲಾಖೆಯ ಸಿಬ್ಬಂಧಿ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತರು ಹಾಜರಿದ್ದರು.